ಗಲ್ಫ್

ದುಬೈನಿಂದ 50 ಕೆ.ಜಿ ಚಿನ್ನದೊಂದಿಗೆ ನೀರವ್ ಮೋದಿ ಸೋದರ ಪರಾರಿ!

Pinterest LinkedIn Tumblr


ಮುಂಬಯಿ: ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಹಗರಣದ ರೂವಾರಿ ವಜ್ರದ ವ್ಯಾಪಾರಿ ನೀರವ್‌ ಮೋದಿ ಅವರ ಸೋದರ ನಿಹಾಲ್‌, ದುಬೈನ ಜ್ಯುವೆಲ್ಲರಿ ಒಂದರಿಂದ 50 ಕೆ.ಜಿ ಚಿನ್ನ ಸಹಿತ ‘ನಾಪತ್ತೆ’ಯಾಗಿದ್ದಾರೆ.

ಪಿಎನ್‌ಬಿ ಹಗರಣದಲ್ಲಿ ಸಿಬಿಐ ತಮ್ಮ ವಿರುದ್ಧವೂ ವಂಚನೆ ಕೇಸು ದಾಖಲಿಸಿರುವುದು ತಿಳಿದ ಬಳಿಕ ಈತ ನಾಪತ್ತೆಯಾಗಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ವಿದೇಶಗಳಲ್ಲಿರುವ ನೀರವ್ ಮೋದಿ ಆಭರಣ ಮಳಿಗೆಗಳ ಮೂಲಕ ಮಾರಾಟಕ್ಕೆಂದು ಈ ಚಿನ್ನವನ್ನು ಸಂಗ್ರಹಿಸಿ ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಗರಣ ಬಯಲಾದ ಬಳಿಕ, ದುಬೈನ ಜ್ಯುವೆಲ್ಲರಿಯಿಂದ ಚಿನ್ನವನ್ನು ಬೇರೆಡೆ ವರ್ಗಾಯಿಸುವುದನ್ನು ತಡೆಯಲು ತನಿಖಾ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಎಂಬ ಸುಳಿವು ದೊರೆತೇ ಆತ ಬೇರೆ ಯಾವುದೋ ಸುರಕ್ಷಿತ ಸ್ಥಳಕ್ಕೆ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಹಾಲ್‌ ಅಮೆರಿಕದ ನಿವಾಸಿಯಾಗಿದ್ದು, ಮೆಹುಲ್‌ ಚೋಕ್ಸಿಯ ಕಂಪನಿಗಳಲ್ಲಿ ಒಂದಾದ ಗೀತಾಂಜಲಿ ಜೆಮ್ಸ್‌ನ ಪಾಲುದಾರನಾಗಿದ್ದಾರೆ.

ಆರಂಭದಲ್ಲಿ ಸಿಬಿಐ ಆರೋಪ ಪಟ್ಟಿಯಲ್ಲಿ ನಿಹಾಲ್‌ ಹೆಸರು ಇರಲಿಲ್ಲ. ಆದರೆ, ಭಾರತದಿಂದ ಬ್ಯಾಂಕ್‌ ಹಣವನ್ನು ಅಕ್ರಮವಾಗಿ ವಿದೇಶಗಳಿಗೆ ವರ್ಗಾಯಿಸುವಲ್ಲಿ ಈತನ ಪಾತ್ರವಿದೆ ಎಂಬುದನ್ನು ಜಾರಿ ನಿರ್ದೇಶನಾಲಯ (ಇಡಿ) ಪತ್ತೆ ಮಾಡಿದ ಬಳಿಕ ಸಿಬಿಐ ವಂಚನೆ ಕೇಸು ದಾಖಲಿಸಿದೆ.

ಮುಂಬಯಿಯ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಇ.ಡಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ 24 ಆರೋಪಿಗಳ ಪೈಕಿ ನಿಹಾಲ್‌ ಕೂಡ ಒಬ್ಬರು.

ನೀರವ್‌ ಮೋದಿಯ ಚಿಕ್ಕಪ್ಪ ಮೆಹುಲ್ ಚೋಕ್ಸಿ, ದುಬೈನ ಸುರಕ್ಷಿತ ನಿವಾಸದಿಂದ 34,000 ಚಿನ್ನ ಮತ್ತು ವಜ್ರದ ತುಂಡುಗಳನ್ನು ಬೇರಡೆ ಸಾಗಿಸಲು ಯೋಜನೆ ಹಾಕಿಕೊಂಡಿದ್ದರು.

ದುಬೈನಿಂದ ಚಿನ್ನ ಮತ್ತು ವಜ್ರಗಳನ್ನು ಬೇರೆಡೆ ಸಾಗಿಸುವ ಚೋಕ್ಸಿಯ ಪ್ರಯತ್ನಗಳನ್ನು ಇ.ಡಿ ಅಧಿಕಾರಿಗಳು ವಿಫಲಗೊಳಿಸಿದ್ದಾರೆ. ಈ ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಶೀಘ್ರವೇ ಭಾರತಕ್ಕೆ ತರಲಾಗುತ್ತಿದೆ.

ಪಿಎನ್‌ಬಿ ವಂಚನೆ ಹಗರಣದ ಮೊದಲ ಕೇಸು ದಾಖಲಾಗುವ ಮುನ್ನವೇ ನೀರವ್‌ ಮೋದಿಯ ಕುಟುಂಬ ಭಾರತ ಬಿಟ್ಟು ಪಲಾಯನ ಮಾಡಿತ್ತು. ಆದರೆ ಸಾಲ ಮರುಪಾವತಿಗೆ ಪಿಎನ್‌ಬಿಯಿಂದ ಇನ್ನಷ್ಟು ಕಾಲಾವಕಾಶ ಕೇಳಲು ನಿಹಾಲ್‌ ಅನ್ನು ಭಾರತಕ್ಕೆ ಕಳುಹಿಸಿಕೊಟ್ಟಿದ್ದರು.

ಇನ್ನಷ್ಟು ಸಾಲ ನೀಡುವಂತೆ ನಿಹಾಲ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಹಣವನ್ನೇ ಬಳಸಿ ಹಳೆಯ ಸಾಲ ಮರುಪಾವತಿ ಮಾಡುವುದಾಗಿಯೂ ಭರವಸೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ. ವಿದೇಶಗಳಲ್ಲಿ ಹೂಡಿಕೆ ಮಾಡಿ ಹಾಗೂ ಐಪಿಓಗಳನ್ನು ಮಾರಾಟ ಮಾಡಿ ಬಂದ ಲಾಭದಿಂದ ಸಾಲ ಮರುಪಾವತಿ ಮಾಡುವುದಾಗಿಯೂ ಬ್ಯಾಂಕ್‌ ಅಧಿಕಾರಿಗಳನ್ನು ನಿಹಾಲ್ ನಂಬಿಸಲು ಪ್ರಯತ್ನಿಸಿದ್ದರು. ಆದರೆ ಬ್ಯಾಂಕ್‌ ಈ ಕೋರಿಕೆಯನ್ನು ತಿರಸ್ಕರಿಸಿತ್ತು.

Comments are closed.