ರಾಷ್ಟ್ರೀಯ

ಬೆಂಕಿ ಕಡ್ಡಿಯೊಂದಿಗೆ ಆಟವಾಡುತ್ತ ಇಡೀ ಹಳ್ಳಿಯನ್ನೇ ಸುಟ್ಟಹಾಕಿದ ಐದು ವರ್ಷದ ಬಾಲಕ!

Pinterest LinkedIn Tumblr


ಆಗ್ರಾ: ಬೆಂಕಿ ಕಡ್ಡಿಯೊಂದಿಗೆ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಆಕಸ್ಮಿಕವಾಗಿ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಊರೇ ಹೊತ್ತಿ ಉರಿದ ಪ್ರಸಂಗ ಆಗ್ರಾ ಸಮೀಪ ಶನಿವಾರ ನಡೆದಿದೆ. ಅದೃಷ್ಟವಶಾತ್ ಅವಘಡದಲ್ಲಿ ಪ್ರಾಣಹಾನಿಯಾಗಲಿ, ಗಾಯಗಳಾಗಲಿ ಆಗಿಲ್ಲ.

ಅಮೃತ್ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ, ಗಂಗಾ ನದಿ ತಟದಲ್ಲಿರುವ ಹಿಂದುಳಿದ ಗ್ರಾಮವಾದ ಝಂಡಿ ಕಿ ಮಡಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಘಟನೆ ವಿವರ: ಬೆಂಕಿ ಕಡ್ಡಿಯೊಂದಿಗೆ ಆಟವಾಡುತ್ತಿದ್ದ 5 ವರ್ಷದ ಹುಡುಗ ಆಕಸ್ಮಿಕವಾಗಿ ತನ್ನ ಗುಡಿಸಲಿಗೆ ಬೆಂಕಿ ಹಚ್ಚಿದ್ದಾನೆ. ಕ್ಷಣಮಾತ್ರದಲ್ಲಿ ಆತನ ಗುಡಿಸಲು ಹೊತ್ತಿ ಉರಿದಿದ್ದು, ಪಸರಿಯುತ್ತ ಸಾಗಿದ ಬೆಂಕಿಗೆ ಸಂಪೂರ್ಣ ಗ್ರಾಮವೇ ಹೊತ್ತಿ ಉರಿದಿದೆ. ಅತ್ಯಂತ ದುರ್ಗಮ ಪ್ರದೇಶವಾಗಿರುವ ಈ ಹಳ್ಳಿಯ ಸಂಪರ್ಕ ವ್ಯವಸ್ಥೆ ಅತೀ ಕಳಪೆಯಾಗಿದ್ದು ಒಂದೇ ಒಂದು ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪಿದ್ದರಿಂದ ಹಾನಿ ಪ್ರಮಾಣ ಹೆಚ್ಚಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಅಧಿಕಾರಿ ಪ್ರಕಾಶ್, ಗ್ರಾಮದಲ್ಲಿ ಸುಮಾರು 60 ಮನೆಗಳಿದ್ದು, ಹೆಚ್ಚಿನವು ಹುಲ್ಲು, ಪ್ಲಾಸ್ಟಿಕ್ ತಗಡಿನಿಂದ ನಿರ್ಮಿಸಲ್ಪಟ್ಟಿವೆ. ಹೀಗಾಗಿ ಬೆಂಕಿ ಸುಲಭವಾಗಿ ಪಸರಿಸಿದ್ದು ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಗ್ರಾಮವಾಸಿಗಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದ್ದು, ಆಹಾರ ಮತ್ತು ನೀರನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.

ಈ ಅವಘಡ ಆಕಸ್ಮಿಕವಾಗಿ ನಡೆದಿರುವುದರಿಂದ ಬಾಲಕ ಅಥವಾ ಅವರ ಪೋಷಕರ ವಿರುದ್ಧ ದೂರು ದಾಖಲಾಗಿಲ್ಲ. ಘಟನೆ ನಡೆದಾಗ ಬಾಲಕನ ತಾಯಿ ನೀರು ತರಲು ಹೋಗಿದ್ದರು ಮತ್ತು ತಂದೆ ತುರ್ತು ಕೆಲಸದ ನಿಮಿತ್ತ ಪರ ಊರಿಗೆ ಹೋಗಿದ್ದರು ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಭೇಟಿ ನೀಡಿರುವ ಜಿಲ್ಲಾಧಿಕಾರಿ ಸೂಕ್ತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ಭರವಸೆ ನೀಡಿದ್ದಾರೆ.

Comments are closed.