ರಾಷ್ಟ್ರೀಯ

ಗ್ರಾಮ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಪರ ಕ್ರಿಕೆಟಿಗ ವಿರಾಟ್​ ಕೊಹ್ಲಿ ಪ್ರಚಾರ!

Pinterest LinkedIn Tumblr


ಪುಣೆ: ಚುನಾವಣೆಯಲ್ಲಿ ಗೆಲುವು ಸಾಧಿಸಲು ಅಭ್ಯರ್ಥಿಗಳು ಪ್ರಚಾರಕ್ಕಾಗಿ ಗಣ್ಯ ವ್ಯಕ್ತಿಗಳನ್ನು ಕತೆರುವುದು ಸಾಮಾನ್ಯ. ಆದರೆ ಮಹಾರಾಷ್ಟ್ರದಲ್ಲೊಬ್ಬ ವ್ಯಕ್ತಿ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ತಮ್ಮ ಪರ ಪ್ರಚಾರ ಮಾಡುತ್ತಾರೆ ಎಂದು ಪ್ರಚಾರ ಗಿಟ್ಟಿಸಿ ಜನರನ್ನು ಬಕರಾ ಮಾಡಿದ್ದಾನೆ.

ಮಹರಾಷ್ಟ್ರದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ಪುಣೆ ಜಿಲ್ಲೆಯ ಶಿರೂರ್​ನಲ್ಲಿರುವ ರಾಮಲಿಂಗಾ ಗ್ರಾಮ ಪಂಚಾಯತಿಯ ಸರಪಂಚ ಹುದ್ದೆಗೆ ವಿಟ್ಟಲ್​ ಗಣಪತ್​ ಘಾವಟೆ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರು ತಮ್ಮ ಪರವಾಗಿ ವಿರಾಟ್​ ಕೊಹ್ಲಿ ಪ್ರಚಾರ ಮಾಡುತ್ತಾರೆ ಎಂದು ಊರಲ್ಲೆಲ್ಲಾ ಬ್ಯಾನರ್​ ಹಾಕಿಸಿ ಭರ್ಜರಿ ಪ್ರಚಾರ ಪಡೆದಿದ್ದಾರೆ.

ಫೆಬ್ರವರಿ 25 ರಂದು ಘಾವಟೆ ಪ್ರಚಾರ ಕಾರ್ಯಕ್ರಮ ಆಯೋಜಿಸಿದ್ದರು. ತಮ್ಮ ನೆಚ್ಚಿನ ಕ್ರೀಡಾಪಟುವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಸಭೆಗೆ ಆಗಮಿಸಿದ್ದರು. ಆದರೆ ಅಲ್ಲಿ ನಡೆದದ್ದೇ ಬೇರೆ, ಘಾವಟೆ ಅವರು ವಿರಾಟ್​ ಕೊಹ್ಲಿ ಬದಲು ಅವರನ್ನೇ ಹೋಲುವ ಜೂನಿಯರ್​ ಕೊಹ್ಲಿಯನ್ನು ಕರೆತಂದು ವೇದಿಕೆಯ ಮೇಲೆ ನಿಲ್ಲಿಸಿದ್ದಾರೆ.

ನಿಜವಾದ ಕೊಹ್ಲಿಯನ್ನು ನೋಡಲು ಸೇರಿದ್ದ ಜನರು ಜೂನಿಯರ್​ ಕೊಹ್ಲಿಯನ್ನು ನೋಡಿ ದಂಗಾಗಿದ್ದಾರೆ. ಜೂನಿಯರ್​ ಕೊಹ್ಲಿ ಪ್ರಚಾರ ನಡೆಸಿದ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಜನರು ಪ್ರಚಾರ ಪಡೆಯಲು ಯಾವೆಲ್ಲಾ ಗಿಮಿಕ್​ ಮಾಡುತ್ತಾರೆ ಎಂಬುದರ ಕುರಿತು ರಸವತ್ತಾದ ಚರ್ಚೆ ನಡೆಯುತ್ತಿದೆ.

Comments are closed.