ಹೊಸದಿಲ್ಲಿ : ದಿನೇಶ್ ಎಂಬ ವಿಚಾರಣಾಧೀನ ಕೈದಿಯನ್ನು ದಿಲ್ಲಿಯ ತೀಸ್ ಹಜಾರಿ ಕೋರ್ಟ್‌ಗೆ ಕರೆತರುವಾಗ 15 ವರ್ಷ ಪ್ರಾಯದ ಬಾಲಕನೋರ್ವ ಆತನ ಮೇಲೆ ಗುಂಡೆಸೆದ ಘಟನೆ ನಡೆದಿದೆ.
ಘಟನೆ ನಡೆದ ಸ್ಥಳದಲ್ಲೆ ಇದ್ದ ಪೊಲೀಸರು ಆರೋಪಿ ಬಾಲಕನನ್ನು ಕೂಡಲೇ ತಮ್ಮ ವಶಕ್ಕೆ ತೆಗೆದುಕೊಂಡರು. ಗುಂಡೇಟಿಗೆ ಗುರಿಯಾದ್ ದಿನೇಶ್ ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಯಿತು. ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವರದಿಯಾಗಿದೆ.
ಮಹಿಳೆಯ ಕೊಲೆ ಪ್ರಕರಣದ ಆರೋಪಿಯಾಗಿರುವ ವಿಚಾರಣಾಧೀನ ಕೈದಿ ದಿನೇಶ್‌ನನ್ನು ಹರಿಯಾಣದ ರೋಹಟಕ್ ನಿಂದ ಕೋರ್ಟ್‌ಗೆ ಕರೆತರಲಾಗುತ್ತಿತ್ತು. ಆತನನ್ನು ಕೋರ್ಟ್ ಆವರಣದೊಳಗೆ ಕರೆತರುವಾಗ ಆಗಷ್ಟೇ ಅಲ್ಲೇ ಸಮೀಪ ಬಸ್ಸಿನಿಂದ ಇಳಿದ ಆರೋಪಿ ಬಾಲಕನು ದಿನೇಶ್ ಮೇಲೆ ಗುಂಡಿನ ದಾಳಿ ನಡೆಸಿದ.
ದಿನೇಶ್ ಒಬ್ಬ ಶಾರ್ಪ್ ಶೂಟರ್ ಆಗಿದ್ದು ಆತ ಗೋಗಿ ಎಂದು ಕರೆಯಲ್ಪಡುವ ಗ್ಯಾಂಗಿಗೆ ಸೇರಿದವನಾಗಿದ್ದಾನೆ. ಈತನ ಎದುರಾಳಿ, ತೀಲೂ ಗ್ಯಾಂಗಿನವರೇ ಈ ಫೈರಿಂಗ್ ಕೃತ್ಯಕ್ಕೆ ಕಾರಣರೆಂದು ಹೇಳಲಾಗಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗುಂಡಿನ ದಾಳಿಯ ಹಿಂದಿನ ಕಾರಣವೇನೆಂಬುದು ಗೊತ್ತಾಗಿಲ್ಲ; ಆರೋಪಿ ಬಾಲಕನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.
Comments are closed.