ಹೊಸದಿಲ್ಲಿ : ದೇಶದಲ್ಲಿ ನಿರಂತರ 16ನೇ ದಿನವಾಗಿ ಇಂದು ಕೂಡ ಪೆಟ್ರೋಲ್ ಮತ್ತು ಡೀಸಿಲ್ ದರಗಳು ಏರಿವೆ. ದಿಲ್ಲಿಯಲ್ಲಿ ಪೆಟ್ರೋಲ್ ಲೀಟರ್ ದರ 78.43 ರೂ. ಇದೆಯಾದರೆ ಮುಂಬಯಿಯಲ್ಲಿ ಅದು 86.24 ರೂ. ಇದೆ.
ಈ ನಡುವೆ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಏರುತ್ತಿರುವ ಇಂಧನ ದರಗಳನ್ನು ನಿಭಾಯಿಸಲು ಶಾಶ್ವತ ವ್ಯವಸ್ಥೆಯೊಂದನ್ನು ರೂಪಿಸುವ ಕುರಿತ ಸರಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
“ಮೇಲ್ನೋಟದ ಪರಿಹಾರವನ್ನು ನಾವು ಬಯಸುವುದಿಲ್ಲ; ದೀರ್ಘಾವಧಿಯ ಪರಿಹಾರದ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ’ ಎಂದು ಸಚಿವ ಪ್ರಧಾನ್ ಮಾಧ್ಯಮಕ್ಕೆ ಹೇಳಿದ್ದಾರೆ.
ನಿರಂತರವಾಗಿ ಏರುತ್ತಿರುವ ಇಂಧನೆ ಬೆಲೆಯನ್ನು ನಿಯಂತ್ರಿಸುವ ತುರ್ತು ಕ್ರಮವನ್ನು ಸರಕಾರ ಕೈಗೊಳ್ಳಬೇಕೆಂದು ವಿರೋಧ ಪಕ್ಷಗಳು ಮಾತ್ರವಲ್ಲದೆ ಸರಕಾರದ ಒಳಗಿನವರೂ ತೀವ್ರವಾದ ಒತ್ತಡ ಹೇರುವಂತೆ ಆಗ್ರಹಿಸುತ್ತಿದ್ದಾರೆ.
ಇಂಧನ ಬೆಲೆಯ ನಿರಂತರ ಏರಿಕೆಯನ್ನು ಖಂಡಿಸಿ ತುರ್ತು ನಿಯಂತ್ರಣ ಕ್ರಮ ಆಗ್ರಹಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ಉತ್ತರವಾಗಿ ಪ್ರಧಾನ್ ಅವರು, ಇಂಧನ ಬೆಲೆ ನಿಯಂತ್ರಣಕ್ಕೆ ರಾತ್ರಿ ಬೆಳಗಾಗುವುದರೊಳಗೆ ಪರಿಹಾರ ಕಾಣಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
“ಚಿದಂಬರಂ ಅವರು ಇನ್ನೂ ನಾಲ್ಕು ಮಂದಿ ಅರ್ಥಶಾಸ್ತ್ರಜ್ಞರೊಡಗೂಡಿ ನನ್ನೊಂದಿಗೆ ವಾದಿಸಬಹುದು; ನಾವು ನಮ್ಮ ಹೊಣೆಗಾರಿಕೆಯಿಂದ ಓಡಿ ಹೋಗುವುದಿಲ್ಲ; ಮುಂದಿನ ನಾಲ್ಕು – ಐದು ದಿನಗಳ ಮಟ್ಟಿಗಂತೂ ಇಂಧನ ಬೆಲೆಗಳು ಇಳಿಯುವುದಿಲ್ಲ’ ಎಂದು ಪ್ರಧಾನ ಹೇಳಿದರು.
ವಾರಗಳ ಹಿಂದಷ್ಟೇ ಚಿದಂಬರಂ ಅವರು “ದೇಶದಲ್ಲಿನ ಪೆಟ್ರೋಲ್ ಬೆಲೆಯನ್ನು 25 ರೂ.ಗೆ ಇಳಿಸಲು ಸಾಧ್ಯವಿದೆ; ಆದರೆ ಸರಕಾರ ಅದನ್ನು ಮಾಡುವುದಿಲ್ಲ’ ಎಂದು ಟೀಕಿಸಿದ್ದರು.
Comments are closed.