ರಾಷ್ಟ್ರೀಯ

ನೀರಿನ ಸಮಸ್ಯೆ: ಹಿಮಾಚಲ ಪ್ರದೇಶದ ರಾಜಧಾನಿಯಲ್ಲಿ ಸ್ಮಶಾನದ ನೀರು ಕುಡಿದ ಜನ!

Pinterest LinkedIn Tumblr


ಶಿಮ್ಲಾ: ಹಿಮಾಚಲ ಪ್ರದೇಶ ರಾಜಧಾನಿ ಶಿಮ್ಲಾದಲ್ಲಿ ನೀರಿನ ತೊಂದರೆ ಮಿತಿ ಮೀರುತ್ತಿದೆ. ಹೀಗಾಗಿ, ಶಿಮ್ಲಾ ಬಳಿಯ ಉಪನಗರದಲ್ಲಿರುವ ಚಲೌಂತಿ ಪ್ರದೇಶದ ಜನತೆ ಕುಡಿಯುವ ನೀರಿಗಾಗಿ ಪರದಾಡಿ ಬಳಿಕ ರುದ್ರಭೂಮಿಗೆ ಹೋಗಿ ನೀರು ತೆಗೆದುಕೊಂಡು ಬಂದಿದ್ದಾರೆ. ಸತತ 6 ದಿನಗಳಿಂದ ನೀರು ಸಿಗದೆ ಪರದಾಡಿದ ಸ್ಥಳೀಯರು, ಕೊನೆಗೆ ನೀರು ಕುಡಿಯದೆ ಸಾಯುವುದಕ್ಕಿಂತ ಸತ್ತವರ ಬಳಿ ಹೋಗಿ ನೀರು ಕುಡಿಯುವುದು ಲೇಸು ಎಂದುಕೊಂಡು ನೀರು ತೆಗೆದುಕೊಂಡು ಬಂದಿದ್ದಾರೆ.

ಅಲ್ಲದೆ, ಕನ್ಲೋಗ್ ಬೈಪಾಸ್‌ ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಸಂಜೆ 4 ಗಂಟೆಯಿಂದ ಎರಡೂವರೆ ಗಂಟೆಗಳ ಕಾಲ ನೂರಾರು ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳಿಗೆ ತಮ್ಮ ತೊಂದರೆ ಅರಿವಾಗಲೆಂದು ಶಿಮ್ಲಾ ಬಳಿಯ ಜನತೆ ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಸ್ಮಶಾನಕ್ಕೆ ಹೋಗಿ ಕುಡಿಯುವ ನೀರು ತರಬೇಕಾದ ಪರಿಸ್ಥಿತಿ ಬಂದಿದೆ. ಇದನ್ನು ಬಿಟ್ಟು ನಮಗೆ ಪರ್ಯಾಯ ಮಾರ್ಗ ಸಿಗಲಿಲ್ಲ ಎಂದು ಸಂಜೀವಾನಿ ಜನ್‌ ಕಲ್ಯಾಣ್ ಸೊಸೈಟಿಯ ಉಪಾಧ್ಯಕ್ಷ ಸತೀಶ್ ಕುಮಾರ್ ಹೇಳಿದ್ದಾರೆ. ಇನ್ನು, ಪ್ರತಿಭಟನೆ ಬಳಿಕ ನಮ್ಮ ಪ್ರದೇಶಕ್ಕೆ ಒಂದು ಟ್ಯಾಂಕರ್ ಕುಡಿಯುವ ನೀರು ಕಳುಹಿಸಲಾಯಿತು. ಆದರೆ, 5,000ಕ್ಕೂ ಅಧಿಕ ನಿವಾಸಿಗಳು ಇಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇದು ಸಾಕಾಗುವುದಿಲ್ಲ ಎಂದು ಸತೀಶ್ ತಿಳಿಸಿದ್ದಾರೆ. ಜತೆಗೆ, ಸರ್ಕಾರ ಹಾಗೂ ಸ್ಥಳೀಯ ಆಡಳಿತದ ವೈಫಲ್ಯತೆಯಿಂದ ನಮಗೆ ಇಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ ನಾವು ಈ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಚಂದರ್ ಮೋಹನ್ ಚಾಂದೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಶಿಮ್ಲಾ ಸ್ಥಳೀಯ ಆಡಳಿತ ಹಾಗೂ ಹಿಮಾಚಲ ಪ್ರದೇಶ ರಾಜ್ಯವನ್ನು ಬಿಜೆಪಿ ಸರಕಾರ ಆಡಳಿತ ನಡೆಸುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ 24 ಗಂಟೆಗಳ ನಿರಂತರ ನೀರಿನ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ಈಗ ಸಮರ್ಥನೆ ಮಾಡಿಕೊಂಡಿದೆ. ಈ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲದೆ, ಚಳಿಗಾಲದಲ್ಲಿ ಮಂಜು ಬಿದ್ದಿರುವುದರಿಂದ, ನಗರಕ್ಕೆ ನೀರು ಒದಗಿಸುವ ಮೂಲಗಳು ಒಣಗಿಹೋಗಿವೆ. ಹೀಗಾಗಿ ಸಮಸ್ಯೆಯುಂಟಾಗಿದೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಆದರೆ, ಕೆಲವು ಬಿಜೆಪಿ ನಾಯಕರು ಅಧಿಕಾರಿಗಳ ವಿರುದ್ಧವೇ ಆರೋಪ ಮಾಡ್ತಿದ್ದಾರೆ. ಇನ್ನು, ಎಂಜಿನ್ ಘರ್ ವಾರ್ಡ್‌ನ ಕೌನ್ಸಿಲರ್ ಆರತಿ ಚೌಹಾಣ್ ಮಾತ್ರ ಪ್ರದೇಶದಲ್ಲಿ ಸಾಕಷ್ಟು ನೀರಿದೆ. ಕೆಲವು ಹೋಟೆಲ್‌ ಮಾಲೀಕರು ಹಾಗೂ ಪ್ರಭಾವಶಾಲಿ ಜನರು ಹೆಚ್ಚು ನೀರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ಸಾಮಾನ್ಯ ಜನರು ಪರದಾಡುವಂತಾಗಿದೆ ಎಂದು ಆರತಿ ಆರೋಪಿಸಿದ್ದಾರೆ.

ಭಾನುವಾರ ರಾತ್ರಿ ಸಹ ಮುನಿಸಿಪಲ್ ಕಾರ್ಪೊರೇಷನ್ ಕಚೇರಿಯಿಂದ ಹಿಮಾಚಲ ಪ್ರದೇಶ ಸಿಎಂ ಜೈರಾಮ್ ಠಾಕೂರ್ ನಿವಾಸದವರೆಗೆ ನೂರಾರು ನಿವಾಸಿಗಳು ಪ್ರತಿಭಟನಾ ಧರಣಿ ನಡೆಸಿದ್ದಾರೆ. ಅಲ್ಲದೆ, ಚಂಡೀಗಢ ಹೈವೇಯನ್ನು ನಂತರ ತಡೆಹಿಡಿದಿದ್ದು, ನಾವು ನಿದ್ದೆ ಇಲ್ಲದೆ ಕಾಲ ಕಳೆಯಬೇಕಾದರೆ, ಸಿಎಂ ನಿದ್ದೆ ಮಾಡುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ. ಆದರೆ, ಸಿಎಂ ನಿವಾಸದ ಬಳಿ ಪ್ರತಿಭಟನೆ ಮಾಡುತ್ತಿದ್ದವರನ್ನು ಪೊಲೀಸರು ತಡೆದಿದ್ದು, ಕಾಂಗ್ರೆಸ್ ಕೌನ್ಸಿಲರ್ ಸುಷ್ಮಾ ಕುಥಿಯಾಲಾ , ಅವರ ಪತಿ ಹಾಗೂ ಪುತ್ರನ ವಿರುದ್ಧ ಎಫ್‌ಐಆರ್ ಹಾಕಲಾಗಿದೆ. ಆದರೂ, ರಾತ್ರಿ 10 ಗಂಟೆಯಿಂದ ತಡರಾತ್ರಿ 1.30ರವರೆಗೆ ಪ್ರತಿಭಟನಾಕಾರರು ರಸ್ತೆಗಿಳಿದು, ಕುಡಿಯುವ ನೀರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಜಗ್ಗದ ಅಧಿಕಾರಿಗಳು ಸೋಮವಾರ ಬೆಳಗ್ಗೆ ನೀಡುವುದಾಗಿ ಹೇಳಿದ್ದಾರೆ. ಆದರೆ, ರಾತ್ರಿಯೇ ನೀರು ಬೇಕೆಂದು ಪಟ್ಟು ಹಿಡಿದ ನಿವಾಸಿಗಳು, ಸಿಎಂ ಬಳಿ ನಮ್ಮ ತೊಂದರೆಯನ್ನು ಹೇಳಬೇಕೆಂದು ಆಗ್ರಹಿಸಿದ್ದಾರೆ. ಆದರೆ, ಇದಕ್ಕೆ ಅವಕಾಶ ಕೊಡದ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ವಿರುದ್ಧ ಹಲ್ಲೆ ನಡೆಸಿದ್ದು, ಸಿಎಂ ಭೇಟಿಗೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್ ಕೌನ್ಸಿಲರ್ ಸುಷ್ಮಾ ಕುಥಿಯಾಲಾ ಆರೋಪಿಸಿದ್ದಾರೆ.

Comments are closed.