ರಾಷ್ಟ್ರೀಯ

ನಿಫಾ ವೈರಸ್ ಕುರಿತು ಭಯ ಬೇಡ: ದಿಲ್ಲಿ ಫೋರ್ಟಿಸ್ ಆಸ್ಪತ್ರೆ ವೈದ್ಯ ವಿಕಾಸ್‌ ಮೌರ್ಯ

Pinterest LinkedIn Tumblr


ನಿಫಾ ವೈರಸ್‌ ಆತಂಕ ಎಲ್ಲೆಡೆ ಕಾಡಿದೆ. ಜನರು ಹಣ್ಣುಗಳನ್ನು ಕೊಂಡು ತಿನ್ನಲು ಭಯಪಡುತ್ತಿದ್ದಾರೆ. ಆದರೆ ವೈದ್ಯರು ಈ ಸಾಂಕ್ರಾಮಿಕ ರೋಗದ ಬಗ್ಗೆ ತುಂಬಾ ಆತಂಕ ಪಡುವ ಅಗತ್ಯವಿಲ್ಲ, ಆಹಾರವನ್ನು ಸರಿಯಾಗಿ ಬೇಯಿಸಿ ತಿನ್ನಿ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುವಂತೆ ಸಲಹೆ ನೀಡಿದ್ದಾರೆ.

ನಿಫಾ ವೈರಸ್‌ ಎನ್ನುವುದು ಪ್ರಾಣಿಗಳಿಂದ ಮನುಷ್ಯರಿಗೆ, ಮನುಷ್ಯರಿಂದ ಪ್ರಾಣಿಗಳಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದ್ದು ಕೇರಳದಲ್ಲಿ 12 ಜನರನ್ನು ಬಲಿ ತೆಗೆದುಕೊಂಡಿದೆ.

‘ಹಾಗಂತ ನಿಫಾ ವೈರಸ್‌ ಬಗ್ಗೆ ಆತಂಕ ಪಟ್ಟುಕೊಳ್ಳಬೇಡಿ. ನಿಫಾ ವೈರಸ್‌ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಕೆಲವರಲ್ಲಿ ಈ ವೈರಸ್‌ ಸೋಂಕು ತಗುಲಿದ ಒಂದು ವಾರದ ಬಳಿಕ ಲಕ್ಷಣಗಳು ಕಂಡು ಬರುತ್ತದೆ. ಸೋಂಕು ತಗುಲಿದ ವ್ಯಕ್ತಿಯನ್ನು ಯಾರ ಸಂಪರ್ಕವೂ ಇಲ್ಲದೆ ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಿದರೆ 10-15 ದಿನದಲ್ಲಿ ಸೋಂಕು ನಶಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು’ ಎನ್ನುತ್ತಾರೆ ದೆಹಲಿ ಫೋರ್ಟಿಸ್ ಆಸ್ಪತ್ರೆಯ ವೈದ್ಯರಾದ ವಿಕಾಸ್‌ ಮೌರ್ಯ.

ಇದೀಗ ಕೇರಳ ಸರಕಾರ Ribavarin ಚಿಕಿತ್ಸೆಗೆ ಅನುಮತಿ ನೀಡಿದೆ. ಇದೊಂದು ಸೋಂಕು ನಿರೋಧಕ ಚಿಕಿತ್ಸೆಯಾಗಿದ್ದು, ಈ ಚಿಕಿತ್ಸೆಯನ್ನು ಇದುವರೆಗೆ ಪ್ರಯೋಗಿಸಿಲ್ಲವಾದರೂ ಕೆಲವೊಂದು ಅಧ್ಯಯನಗಳು Ribavarin ಸೋಂಕು ನಿಯಂತ್ರಣ ಮಾಡುತ್ತದೆ ಎಂದು ಸಾಬೀತು ಪಡಿಸಿರುವುದರಿಂದ ಇದೀಗ ನಿಫಾ ವೈರಸ್ ಪತ್ತೆಯಾದ ವ್ಯಕ್ತಿಗೆ ಈ ಚಿಕಿತ್ಸೆ ನೀಡಲು ಅನುಮತಿ ಸಿಕ್ಕಿದೆ.

‘ಇದೀಗ ಈ ನಿಫಾ ವೈರಸ್‌ ಕಾಯಿಲೆ ನಿಯಂತ್ರಣಕ್ಕೆ ಬಂದಿದ್ದು, ರಾಜ್ಯ ಆರೋಗ್ಯ ವಿಭಾಗ ಅತ್ಯುತ್ತಮ ಕೆಲಸ ಮಾಡಿದೆ, ಆದ್ದರಿಂದ ಆತಂಕ ಬೇಡ’ ಎಂದು ಅಮೃತಾ ಇನ್ಸಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ವೈದ್ಯರಾದ ವಿದ್ಯಾ ಮೆನನ್‌ ತಿಳಿಸಿದ್ದಾರೆ.

‘ಸೋಂಕು ಇರುವ ಪ್ರದೇಶಕ್ಕೆ ಹೋಗುವುದಾದರೆ ಮಾಸ್ಕ್‌ ಧರಿಸಿ, ಕೆಮ್ಮುವಾಗ, ಸೀನುವಾಗ ಕರ್ಚೀಪ್‌ ಬಾಯಿಗೆ ಅಡ್ಡವಾಗಿ ಹಿಡಿಯಿರಿ, ಕೈಗಳನ್ನು ಸ್ವಚ್ಛಗೊಳಿಸಿ, ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ ಎಂದು ಮೆನನ್‌’ ಹೇಳಿದ್ದಾರೆ.

Comments are closed.