ಪುಣೆ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಗುರುವಾರ ಬಂಧಿತನಾಗಿರುವ ಆರೋಪಿ ಅಮೋಲ್ ಕಾಳೆಗೂ ಹಿಂದೂ ಜನಜಾಗೃತಿ ಸಮಿತಿಗೂ ಸಂಬಂಧವಿಲ್ಲ ಎಂದು ಸಂಘಟನೆ ಸ್ಪಷ್ಟಪಡಿಸಿದೆ.
ಅಮೋಲ್ ಕಾಳೆ (40) 2008ರಲ್ಲೇ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಸಂಘಟನೆ ತೊರೆದಿದ್ದಾನೆ ಎಂದು ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ್ ಶಿಂಧೆ ಹೇಳಿದ್ದಾರೆ.
ಗೌರಿ ಹತ್ಯೆ ಪ್ರಕರಣದ ಬೆನ್ನು ಹತ್ತಿರುವ ಕರ್ನಾಟಕ ಪೊಲೀಸರ ವಿಶೇಷ ತಂಡವು ಅಮೋಲ್ ಕಾಳೆ, ಮನೋಹರ್ ಎಡ್ವೆ (30) ಮತ್ತು ಸುಜಿತ್ ಕುಮಾರ್ ಅಲಿಯಾಸ್ ಪ್ರವೀಣ್ (37) ಮತ್ತು ಅಮಿತ್ ದೆಗ್ವೇಕರ್ ಅಲಿಯಾಸ್ ಪ್ರದೀಪ್ ಎಂಬುವವರನ್ನು ಬಂಧಿಸಿದ್ದಾರೆ.
”ಕಾಳೆ 2008ರವರೆಗೂ ಹಿಂದೂ ಜನಜಾಗೃತಿ ಸಮಿತಿಯ ಜತೆ ಗುರುತಿಸಿಕೊಂಡಿದ್ದ. ಸುಮಾರು 10 ವರ್ಷದಿಂದ ಸಂಘಟನೆಯ ಯಾವುದೇ ಚಟುವಟಿಕೆಯಲ್ಲಿ ಆತ ಪಾಲ್ಗೊಂಡಿಲ್ಲ. ಸಂಘಟನೆ ಜತೆ ಸಂಪರ್ಕದಲ್ಲೂ ಇಲ್ಲ,” ಎಂದು ಶಿಂಧೆ ತಿಳಿಸಿದ್ದಾರೆ.
”ಕಾಳೆಯನ್ನು ಮೇ 21ರಂದು ಬೆಂಗಳೂರು ಪೊಲೀಸರು ಹತ್ಯೆ ಯತ್ನ, ಕ್ರಿಮಿನಲ್ ಸಂಚು ಮತ್ತು ಶಸ್ತ್ರಾಸ್ತ್ರ ಕಾಯಿದೆ ಅಡಿ ಮೊದಲು ಬಂಧಿಸಿದ್ದಾರೆ. ಮೇ 23ರಂದು ಪುಣೆಯ ಪಿಂಪ್ರಿ-ಚಿಂಚ್ವಾಡ ಪ್ರದೇಶದಲ್ಲಿರುವ ಕಾಳೆಯ ನಿವಾಸದಲ್ಲಿ ಕರ್ನಾಟಕ ಪೊಲೀಸರು ಶೋಧ ನಡೆಸಿದ್ದರು. ಮೇ 31ರಂದು ಆತನನ್ನು ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದೆ,” ಎಂದು ಎಂದು ಪುಣೆಯ ಉಪ ಪೊಲೀಸ್ ಆಯುಕ್ತ ಗಣೇಶ್ ಶಿಂಧೆ ಹೇಳಿದ್ದಾರೆ.
ಮೂಲಗಳ ಪ್ರಕಾರ ಆರೋಪಿ ಕಾಳೆ, ತನ್ನ ಪತ್ನಿ, ಪುತ್ರ ಮತ್ತು ತಾಯಿಯೊಂದಿಗೆ ಪುಣೆಯ ಪಿಂಪ್ರಿ-ಚಂಚ್ವಾಡದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ಪುಣೆಯಲ್ಲಿ ಈತನ ವಿರುದ್ಧ ಯಾವುದೇ ಪೊಲೀಸ್ ಪ್ರಕರಣಗಳಿಲ್ಲ
Comments are closed.