ರಾಷ್ಟ್ರೀಯ

ಪಾಕ್‌ ಐಎಸ್‌ಐನಿಂದ ದೇಶದ ಹೊಸ ನಕಲಿ ನೋಟಿಗಾಗಿ ಅಮಾನ್ಯ ನೋಟು ಖರೀದಿ

Pinterest LinkedIn Tumblr


ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಎನ್‌ಡಿಎ ಸರಕಾರದಿಂದ ಅಮಾನ್ಯಗೊಂಡಿದ್ದ 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳನ್ನು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಪಾಕಿಸ್ಥಾನದ ಐಎಸ್‌ಐ ಬೇಹು ಸಂಸ್ಥೆಯು ಭಾರತೀಯ ಏಜಂಟರುಗಳಿಂದ ಖರೀದಿಸುತ್ತಿರುವುದನ್ನು ಭಾರತೀಯ ಗುಪ್ತಚರ ದಳ ಪತ್ತೆ ಹಚ್ಚಿದೆ.

ಅಮಾನ್ಯಗೊಂಡ ಕರೆನ್ಸಿ ನೋಟುಗಳಲ್ಲಿರುವ ಸೂಕ್ಷ್ಮ ಭದ್ರತಾ ತಂತಿಯನ್ನು ಹೊರ ತೆಗೆದು ಅವುಗಳನ್ನು ಹೊಸ 50, 500 ಮತ್ತು 1,000 ರೂ.ಗಳ ನಕಲಿ ಭಾರತೀಯ ಕರೆನ್ಸಿಗಳ ಮುದ್ರಣದಲ್ಲಿ ಬಳಸುವುದು ಐಎಸ್‌ಐ ತಂತ್ರವಾಗಿರುವುದು ಇದೀಗ ಬಹಿರಂಗವಾಗಿದೆ.

ಅಮಾನ್ಯಗೊಂಡಿರುವ ಕರೆನ್ಸಿ ನೋಟುಗಳನ್ನು ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿನ ತನ್ನ ಏಜಂಟರುಗಳಿಂದ ಸಂಗ್ರಹಿಸಿಸುವ ದಾವೂದ್‌ ಇಬ್ರಾಹಿಂ ಗ್ಯಾಂಗ್‌ನವರು ಅವುಗಳನ್ನು ಮೊದಲು ನೇಪಾಲಕ್ಕೆ ರವಾನಿಸಿ ಅಲ್ಲಿಂದ ಕರಾಚಿ ಮತ್ತು ಪೇಶಾವರಕ್ಕೆ ರವಾನಿಸುತ್ತಾರೆ.

ಕರಾಚಿ ಮತ್ತು ಪೇಶಾವರದಲ್ಲಿ ಭಾರತೀಯ ನಕಲಿ ನೋಟುಗಳನ್ನು ಮುದ್ರಿಸುವಾಗ ಅಮಾನ್ಯಗೊಂಡ ನೋಟುಗಳಿಂದ ತೆಗೆಯಲಾದ ಸೂಕ್ಷ್ಮ ಭದ್ರತಾ ತಂತಿಯನ್ನು ಬಳಸಲಾಗುತ್ತದೆ. ಈ ಭದ್ರತಾ ತಂತಿಗಳನ್ನು ಒಳಗೊಂಡ ಹೊಸ 50, 500 ಮತ್ತು 1,000 ರೂ.ಗಳ ನಕಲಿ ಭಾತೀಯ ಕರೆನ್ಸಿಗಳನ್ನು ಅನಂತರ ದುಬೈ, ನೇಪಾಲ, ಬಾಂಗ್ಲಾದೇಶ ಮೂಲಕ ಭಾರತದಲ್ಲಿ ಚಲಾವಣೆಗಾಗಿ ಕಳುಹಿಸಲಾಗುತ್ತದೆ ಎಂಬುದನ್ನು ಗುಪ್ತಚರ ದಳ ಪತ್ತೆ ಹಚ್ಚಿರುವುದಾಗಿ ವರದಿಯಾಗಿದೆ.

ಈ ಹಿನ್ನೆಲೆಯಲ್ಲಿ ಅಮಾನ್ಯಗೊಂಡಿರುವ 500 ಮತ್ತು 1,000 ರೂ.ಗಳ ಕರೆನ್ಸಿಗಳನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಏಜಂಟರುಗಳು ಭಾರೀ ಪ್ರಮಾಣದಲ್ಲಿ ಖರೀದಿಸುತ್ತಿರುವುದು ಪತ್ತೆಯಾಗಿದೆ. ಇಂತಹ ಏಜಂಟರುಗಳನ್ನು ಬಂಧಿಸಿ ಪ್ರಶ್ನಿಸಿದಾಗ ಈ ನೋಟುಗಳ ನಿರ್ವಹಣೆಯಲ್ಲಿ ನೇಪಾಲ, ಬಾಂಗ್ಲಾದೇಶ, ದುಬೈ ನಲ್ಲಿನ ಪಾಕ್‌ ಕಳ್ಳಸಾಗಣೆಗಾರರು ಹೊಸ ನಕಲಿ ಭಾರತೀಯ ಕರೆನ್ಸಿಗಳನ್ನು ಮುದ್ರಿಸಲು ಬಳುಸುವುದಕ್ಕಾಗಿ ಖರೀದಿಸುತ್ತಾರೆ ಎಂದು ಬಾಯಿಬಿಟ್ಟಿದ್ದಾರೆ ಎಂಬುದಾಗಿ ವರದಿಯಾಗಿದೆ.

ಭಾರತದ ರಾಷ್ಟ್ರೀಯ ತನಿಖಾ ದಳ ವಿವಿಧೆಡೆಗಳಲ್ಲಿ ವಶಪಡಿಸಿಕೊಂಡಿರುವ ಹೊಸ ಭಾರತೀಯ ಕರೆನ್ಸಿಗಳ ನಕಲಿ ನೋಟುಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅವು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಿದ್ಧವಾಗಿರುವುದನ್ನು ಮತ್ತು ಜನಸಾಮಾನ್ಯರಿಗೆ ಅವುಗಳ ನಕಲಿತನವೇ ಗೊತ್ತಾಗದಿರುವಷ್ಟು ಅವು ಅಸಲಿ ಸ್ವರೂಪ ಹೊಂದಿರುವುದನ್ನು ಕಂಡುಕೊಂಡಿದ್ದಾರೆ.

Comments are closed.