ರಾಷ್ಟ್ರೀಯ

ವಿಚ್ಛೇದನ ಪಡೆಯಬೇಕಿದ್ದ ದಂಪತಿಯನ್ನು ಒಂದಾಗಿಸಿದ ಮಗು!

Pinterest LinkedIn Tumblr


ಗಾಜಿಯಾಬಾದ್‌: ಮೂರು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ಮಗನ ಹಠಕ್ಕೆ ಸೋತು ಮತ್ತೆ ಒಂದಾಗಲು ನಿರ್ಧರಿಸಿದ ಅಪರೂಪದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ.

ಸಾಹಿಬಾಬಾದ್ ಪೊಲೀಸ್ ಠಾಣೆಯ ವ್ಯಪ್ತಿಯಲ್ಲಿ ವಾಸಿಸುತ್ತಿದ್ದ ಯುವಕ ಕಳೆದ 6 ವರ್ಷದ ಹಿಂದೆ ಲೋನಿ ನಿವಾಸಿ ಯುವತಿಯನ್ನು ಮದುವೆಯಾಗಿದ್ದ. ಮದುವೆಯಾಗಿ ಒಂದು ವರ್ಷಕ್ಕೆ ದಂಪತಿಗೆ ಗಂಡು ಮಗು ಹುಟ್ಟಿತು. ಬಳಿಕ ಇಬ್ಬರಲ್ಲಿ ಮನಸ್ತಾಪ ಶುರುವಾಯಿತು. ಪತಿಯ ಜತೆ ಹೊಂದಿಕೊಂಡು ಹೋಗುವುದು ದುಸ್ತರ ಎಂಬ ತೀರ್ಮಾನಕ್ಕೆ ಬಂದ ಪತ್ನಿ ಮಗನೊಂದಿಗೆ ಪ್ರತ್ಯೇಕವಾಗಿ ವಾಸಿಸ ಹತ್ತಿದಳು. ಬಳಿಕ ತನಗೆ ಕುಟುಂಬ ನಿರ್ವಹಣಾ ವೆಚ್ಚ ನೀಡಬೇಕೆಂದು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಳು. ಮಗನನ್ನು ತನ್ನ ಸುಪರ್ದಿಗೆ ವಹಿಸಬೇಕೆಂದು ಕೋರಿ ಪತಿ ಕೂಡ ನ್ಯಾಯಾಲಯದ ಮೊರೆ ಹೋಗಿದ್ದ.

ಮಗುವಿನ್ನ ಪೋಷಕತ್ವಕ್ಕೆ ಸಂಬಂಧಿಸಿದಂತೆ ಗುರುವಾರ ವಿಚಾರಣೆ ನಡೆಯುವುದಿತ್ತು. ಹೀಗಾಗಿ ತಾಯಿ ಮಗನನ್ನು ಜತೆಗೆ ಕರೆದುಕೊಂಡು ಬಂದಿದ್ದಳು. ಆ ಸಂದರ್ಭದಲ್ಲಿ ಪತಿ ಕೂಡ ಸ್ಥಳದಲ್ಲಿದ್ದ. ತಂದೆ ಇದ್ದಲ್ಲಿ ಓಡಿ ಹೋಗಿ ಹರಟ ಹತ್ತಿದ ಮಗು ಅವನ ಜತೆಗೆ ಹೋಗುವುದಾಗಿ ಹಠ ಹಿಡಿಯಿತು. ತಾಯಿ ಎಷ್ಟೇ ಹೇಳಿದರೂ ಕೇಳದ ಮಗು ಅಪ್ಪನ ಜತೆಗೆ ಹೋಗುವುದಾಗಿ ಪಟ್ಟು ಹಿಡಿದು ಅಳತೊಡಗಿತು. ತಾಯಿ ಬೈದರೂ ಜಗ್ಗದ ಮಗು ಅಪ್ಪನ ಬಿಟ್ಟು ಕದಲಲಿಲ್ಲ.

ಮುದ್ದು ಮಗುವಿನ ಹಠ ಅಲ್ಲಿದ್ದವರ ಹೃದಯ ಹಿಂಡಿತು. ಎಲ್ಲರೂ ಸೇರಿ ಮಗುವಿನ ಭವಿಷ್ಯಕ್ಕಾಗಿ ನಿಮ್ಮ ಹಠ ಬಿಟ್ಟು ಜತೆಗಿರುವಂತೆ ದಂಪತಿಗೆ ಬುದ್ಧಿ ಹೇಳಿದರು. ಅದೇ ಸರಿ ಎಂದುಕೊಂಡ ಪತಿ, ಪತ್ನಿಯಲ್ಲಿ ಕ್ಷಮೆ ಕೇಳಿದ ಮತ್ತು ಮತ್ತೆಂದೂ ತನ್ನ ತಪ್ಪನ್ನು ಮರುಕಳಿಸುವುದಿಲ್ಲವೆಂದು ಮಾತು ಕೊಟ್ಟ. ಪತಿ ಪರಿ ಪರಿಯಾಗಿ ಕೇಳಿಕೊಂಡ ಬಳಿಕ ಆತನ ಜತೆಗೆ ಹೋಗಲು ಪತ್ನಿ ಒಪ್ಪಿಕೊಂಡಳು.

ಖುಷಿಯಲ್ಲಿ ತೇಲಿ ಹೋದ ಪತಿ ಅವರಿಬ್ಬರಿಗಾಗಿ ಐಸ್ ಕ್ರಿಮ್ ತೆಗೆದುಕೊಂಡು ಬಂದು ತಿನ್ನಿಸಿದ. ಬಳಿಕ ಮೂವರು ಆಲಂಗಿಸಿಕೊಂಡರು. ಬಳಿಕ ದಂಪತಿ ತಮ್ಮ ಪ್ರಕರಣಗಳನ್ನು ಹಿಂದಕ್ಕೆ ಪಡೆಯುವಂತೆ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದರು.

Comments are closed.