ರಾಷ್ಟ್ರೀಯ

1 ಲಕ್ಷ 13 ಸಾವಿರ ನಕಲಿ ಕಂಪನಿಗಳ ಹೊಸ ಪಟ್ಟಿ ಸಿದ್ಧ: ಕಪ್ಪು ಹಣದ ವಿರುದ್ಧ ಮೋದಿ ಸರಕಾರ

Pinterest LinkedIn Tumblr


ಹೊಸದಿಲ್ಲಿ: ಕಪ್ಪು ಹಣದ ವಿರುದ್ಧ ಮೋದಿ ಸರಕಾರ ತನ್ನ ಸಮರವನ್ನು ಮುಂದುವರಿಸಿದೆ. ಹೀಗಾಗಿ, 1 ಲಕ್ಷ 13 ಸಾವಿರ ಕಂಪನಿಗಳ ಪಟ್ಟಿಯನ್ನು ಗಂಭೀರ ವಂಚನೆ ತನಿಖಾ ಕಚೇರಿ ( ಎಸ್‌ಎಫ್‌ಐಓ ) ಸಿದ್ಧಪಡಿಸಿದ್ದು, ಮತ್ತೊಂದು ಹಂತದ ಸಮರವನ್ನು ಸಾರಲು ಕೇಂದ್ರ ಸರಕಾರ ರೆಡಿಯಾಗಿದೆ.

ಈ ಪಟ್ಟಿಯಲ್ಲಿರುವ ಕಂಪನಿಗಳ ಪೈಕಿ 80 ಸಾವಿರ ಕಂಪನಿಗಳು ನಕಲಿ ಕಂಪನಿಗಳು ಎನ್ನಲಾಗಿದ್ದು, ಈ ಪೈಕಿ 16,537 ಕಂಪನಿಗಳು ಅನಧಿಕೃತ ಚಟುವಟಿಕೆ ನಡೆಸುತ್ತಿರುವುದನ್ನು ಎಸ್‌ಎಫ್‌ಐಒ ಪತ್ತೆ ಹಚ್ಚಿದೆ.ಈ ಸಂಬಂಧ ಎಲ್ಲ ಕಂಪನಿಗಳಿಗೆ ನೋಟಿಸ್ ನೀಡಲಾಗಿದ್ದು, ಕಂಪನಿಗಳ ಪ್ರತಿಕ್ರಿಯೆಗೆ ಸಮಯ ನೀಡಲಾಗಿದೆ. ಅವರ ಪ್ರತಿಕ್ರಿಯೆಯನ್ನು ನೋಡಿಕೊಂಡು ಕೇಂದ್ರ ಸರಕಾರ ಸೂಕ್ತ ಕ್ರಮವನ್ನು ಕೈಗೊಳ್ಳಲಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ. 2017ರ ಫೆಬ್ರವರಿಯಲ್ಲಿ ಪ್ರಧಾನಿ ಕಾರ್ಯಾಲಯ ಕಪ್ಪು ಹಣವನ್ನು ಅಕ್ರಮವಾಗಿ ವರ್ಗಾಯಿಸುವ ಕಂಪನಿಗಳನ್ನು ಪತ್ತೆಹಚ್ಚಲು ಟಾಸ್ಕ್‌ಫೋರ್ಸ್ ಅನ್ನು ರಚಿಸಿತ್ತು. ಇದರಡಿಯಲ್ಲಿ ಎಸ್‌ಎಫ್‌ಐಓ ಅನ್ನು ಸಹ ರಚನೆ ಮಾಡಲಾಗಿತ್ತು. ಅಲ್ಲದೆ, ಈ ಸಂಬಂಧ ಕೇಂದ್ರೀಯ ಆರ್ಥಿಕ ಗುಪ್ತಚರ ದಳ( ಸಿಇಐಬಿ) ತಯಾರಿಸಿರುವ ಪ್ರಮಾಣಿತ ಕಾರ್ಯ ವಿಧಾನವನ್ನು ಎಲ್ಲ ತನಿಖಾ ಸಂಸ್ಥೆಗಳು ಅನುಸರಿಸಲಿವೆ.

ಹಲವು ಕಂಪನಿಗಳು ಉದ್ಯಮವನ್ನೇ ಆರಂಭಿಸಿಲ್ಲ. ಅಲ್ಲದೆ, ಹಲವು ಕಂಪನಿಗಳು ಕೇವಲ ಹೆಸರಿಗೆ ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಈ ಬಗ್ಗೆ ತನಿಖೆ ನಡೆಸಿದರೆ ಯಾವುದೇ ವ್ಯವಹಾರಗಳು ನಡೆದಿಲ್ಲ ಎನ್ನುವುದು ಬಯಲಿಗೆ ಬರುತ್ತದೆ ಎಂದು ಖೈತಾನ್ ಅಂಡ್ ಕಂಪನಿಯ ಪಾಲುದಾರರಾಗಿರುವ ಅಭಿಷೇಕ್ ರಸ್ತೋಗಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ವ್ಯವಸ್ಥೆಯನ್ನು ಸರಿಪಡಿಸಲು ಕೇಂದ್ರ ಸರಕಾರ ಇಂತಹ ಕಂಪನಿಗಳನ್ನು ಪತ್ತೆ ಹಚ್ಚಬೇಕು ಎಂದೂ ಹೇಳಿದ್ದಾರೆ.

ಕಳೆದ ವರ್ಷವಷ್ಟೇ ಕೇಂದ್ರ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ 2 ಲಕ್ಷ 26 ಸಾವಿರಕ್ಕೂ ಅಧಿಕ ಕಂಪನಿಗಳನ್ನು ಮುಚ್ಚುವಂತೆ ಸೂಚಿಸಿತ್ತು. ಹಣಕಾಸಿನ ಕುರಿತ ಮಾಹಿತಿ ಹಾಗೂ ಸತತವಾಗಿ ಎರಡಕ್ಕೂ ಅಧಿಕ ಆರ್ಥಿಕ ವರ್ಷಗಳ ಕಾಲ ವಾರ್ಷಿಕ ಐಟಿ ರಿಟರ್ನ್ಸ್ ಸಲ್ಲಿಸದ ಕಂಪನಿಗಳ ಹೆಸರನ್ನು ಮುಚ್ಚುವಂತೆ ಆದೇಶಿಸಿತ್ತು. ಅಲ್ಲದೆ, ದಾಖಲೆ ಪುಸ್ತಕದಿಂದ ಮತ್ತೆ 2 ಲಕ್ಷ 25 ಸಾವಿರಕ್ಕೂ ಅಧಿಕ ಕಂಪನಿಗಳ ಹೆಸರನ್ನು ಕಂಪನಿಗಳ ನೋಂದಾಯಿತ ಪಟ್ಟಿಯಿಂದ ತೆಗೆದುಹಾಕುವಂತೆ ಈ ವರ್ಷ ಪತ್ತೆ ಹಚ್ಚಲಾಗಿದೆ. ಇನ್ನೊಂದೆಡೆ, ಆದಾಯ ತೆರಿಗೆ ಮಾಹಿತಿ ಹಾಗೂ ಸತತ 3 ವರ್ಷಗಳ ಕಾಲ ಐಟಿ ರಿಟರ್ನ್ಸ್ ಸಲ್ಲಿಸದ ಇಂತಹ ಕಂಪನಿಗಳ 3 ಲಕ್ಷಕ್ಕೂ ಅಧಿಕ ನಿರ್ದೇಶಕರನ್ನು ಸಹ ಅನರ್ಹಗೊಳಿಸುವಂತೆ ಸೂಚಿಸಲಾಗಿದೆ.

ಒಟ್ಟಿನಲ್ಲಿ, 2014 ರ ಮೇ ತಿಂಗಳಿಂದ ಅಧಿಕಾರದಲ್ಲಿರುವ ಮೋದಿ ಸರಕಾರ ಕಪ್ಪು ಹಣವನ್ನು ಬೇರು ಸಹಿತವಾಗಿ ಕಿತ್ತು ಹಾಕುವ ಗುರಿ ಹೊಂದಿದ್ದು, ಇದಕ್ಕೆ ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತಿದೆ.

Comments are closed.