ಬಾರಾಬಂಕಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿದ್ದು, ಅಷ್ಟು ಮಾತ್ರವಲ್ಲದೇ ಚೆಕ್ ಬೌನ್ಸ್ ಆಗಿದ್ದಕ್ಕೇ ವಿದ್ಯಾರ್ಥಿಯೇ ದಂಡ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಉತ್ತರ ಪ್ರದೇಶದ ಬಾರಾಬಂಕಿ ಮೂಲದ ಅಲೋಕ್ ಮಿಶ್ರಾ ಎಂಬ ವಿದ್ಯಾರ್ಥಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.93.5 ಅಂಕಗಳಿಸುವ ಮೂಲಕ ಇಡೀ ರಾಜ್ಯಕ್ಕೆ 7ನೇ ರ್ಯಾಂಕ್ ಗಳಿಸಿದ್ದ. ಪ್ರತಿಭಾನ್ವಿತ ವಿದ್ಯಾರ್ಥಿ ಅಲೋಕ್ ಮಿಶ್ರಾ ಸಾಧನೆ ಗುರುತಿಸಿದ ಉತ್ತರ ಪ್ರದೇಶ ಸರ್ಕಾರ ಆತನಿಗೆ 1 ಲಕ್ಷ ನಗದು ಪ್ರೋತ್ಸಾಹ ಧನದ ಚೆಕ್ ನೀಡಿತ್ತು. ಕಳೆದ ಮೇ 29ರಂದು ಲಖನೌನಲ್ಲಿ ನಡೆದ ಸಮಾರಂಭದಲ್ಲಿ ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನದ ಚೆಕ್ ನೀಡಿದ್ದರು.
ಸಿಎಂ ನೀಡಿದ ಚೆಕ್ ಸ್ವೀಕರಿಸಿದ ವಿದ್ಯಾರ್ಥಿಗಳು ಖುಷಿಯಿಂದಲೇ ಮನೆಯತ್ತ ಹೆಜ್ಜೆ ಹಾಕಿದ್ದರು. ಆದರೆ ಈ ಪೈಕಿ ವಿದ್ಯಾರ್ಥಿ ಅಲೋಕ್ ಮಿಶ್ರಾ ಸಿಎಂ ನೀಡಿದ್ದ ಚೆಕ್ ಅನ್ನು ಬ್ಯಾಂಕಿಗೆ ಹಾಕಿ ಹಣ ಪಡೆಯಲು ಮುಂದಾಗಿದ್ದು, ಈ ವೇಳೆ ಚೆಕ್ ಬೌನ್ಸ್ ಆಗಿದೆ. ಚೆಕ್ ನಲ್ಲಿರುವ ಸಹಿ ಸರಿಯಿಲ್ಲ ಎಂದು ಹೇಳಿ ಬ್ಯಾಂಕಿನವರು ಚೆಕ್ ತಿರಸ್ಕರಿಸಿದ್ದು ಮಾತ್ರವಲ್ಲದೇ, ಚೆಕ್ ಬೌನ್ಸ್ ಆಗಿದ್ದಕ್ಕೇ ವಿದ್ಯಾರ್ಥಿಯೇ ದಂಡ ಪಾವತಿಸಬೇಕು ಎಂದು ಹೇಳಿದ್ದಾರೆ. ಚೆಕ್ ನಲ್ಲಿ ಬಾರಾಬಂಕಿ ಜಿಲ್ಲಾಧಿಕಾರಿ ರಾಜ್ ಕುಮಾರ್ ಅವರ ಸಹಿ ಇದ್ದು, ಈ ಸಹಿಯೇ ಸರಿ ಇಲ್ಲ ಎಂದು ಬ್ಯಾಂಕ್ ಸಿಬ್ಬಂದಿ ವಾದಿಸಿದ್ದಾರೆ.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ವಿದ್ಯಾರ್ಥಿ ಅಲೋಕ್ ಕುಮಾರ್ ಗೆ ಮತ್ತೊಂದು ಚೆಕ್ ನೀಡಿದೆ. ಈ ಬಗ್ಗೆ ಮಾತನಾಡಿರುವ ಜಿಲ್ಲಾಧಿಕಾರಿ ರಾಜ್ ಕುಮಾರ್ ಅವರು ತಾಂತ್ರಿಕ ದೋಷದಿಂದ ಚೆಕ್ ಬೌನ್ಸ್ ಆಗಿದೆ. ಈಗ ವಿದ್ಯಾರ್ಥಿಗೆ ಮತ್ತೊಂದು ಚೆಕ್ ನೀಡಲಾಗಿದ್ದು, ವಿಚಾರ ಇತ್ಯರ್ಥವಾಗಿದೆ ಎಂದು ಹೇಳಿದ್ದಾರೆ. ಇತರೆ ಯಾವುದೇ ವಿದ್ಯಾರ್ಥಿಗಳಿಗೂ ಈ ಸಮಸ್ಯೆ ಎದುರಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Comments are closed.