ರಾಷ್ಟ್ರೀಯ

ಬಡ ವಿದ್ಯಾರ್ಥಿಗಳಿಗೆ ಬುಕ್‌ ಬ್ಯಾಂಕ್‌ ಸ್ಥಾಪಿಸಿ 6 ಸಾವಿರ ಮಕ್ಕಳಿಗೆ ಪುಸ್ತಕ ಒದಗಿಸುತ್ತಿರುವ ಅನಿಲ್‌ ಅಗರ್ವಾಲ್‌

Pinterest LinkedIn Tumblr


ಹೊಸದಿಲ್ಲಿ: ಎಷ್ಟೋ ಮಕ್ಕಳು ಪ್ರತಿ ವರ್ಷ ಪಠ್ಯ ಪುಸ್ತಕಗಳನ್ನು ಕೊಂಡುಕೊಳ್ಳಲಾಗದೆ ಶಿಕ್ಷಣ ತ್ಯಜಿಸುತ್ತಾರೆ. ಶಾಲಾ ಕಾಲೇಜುಗಳ ಶುಲ್ಕ ಪಾವತಿಸಲು ಕಷ್ಟ ಪಡುವ ಎಷ್ಟೋ ಕುಟುಂಬ ಒಂದು ವರ್ಷದ ಬಳಿಕ ಬಳಕೆಗೆ ಬಾರದ ಪಠ್ಯಪುಸ್ತಕಕ್ಕೆ ಹಣ ಖರ್ಚು ಮಾಡುವುದು ಹೇಗೆಂಬ ಆಲೋಚನೆಗೆ ಪತ್‌ಪರ್‌ಗಂಜ್‌ ಅನಿಲ್‌ ಅಗರ್ವಾಲ್‌ ಹೊಸ ಉಪಾಯ ಕಂಡು ಹುಡುಕಿದ್ದಾರೆ.

ತಮ್ಮ ಸ್ನೇಹಿತರ ಮಕ್ಕಳಿಂದ ಹಿಂದಿನ ತರಗತಿಯ ಪಠ್ಯಪುಸ್ತಕಗಳನ್ನು ಪಡೆದು, ಅಗತ್ಯವಿರುವ ಮಕ್ಕಳಿಗೆ ನೀಡುತ್ತಿದ್ದಾರೆ. ಎಲ್ಲ ತರಗತಿಗಳ ಮಕ್ಕಳಿಂದ ಪುಸ್ತಕಗಳನ್ನು ಪಡೆವ ಅಗರ್ವಾಲ್‌, ಒಂದು ವರ್ಷದ ಬಳಿಕ ಆ ಪುಸ್ತಕಗಳನ್ನು ವಾಪಸ್‌ ಪಡೆಯುತ್ತಾರೆ. ಹೀಗೆ ಲೈಬ್ರರಿ ಮಾದರಿಯಲ್ಲಿ ಸಣ್ಣದೊಂದು ಬುಕ್‌ ಬ್ಯಾಂಕ್‌ ಸ್ಥಾಪಿಸಿ, ಈ ವರೆಗೆ ಸುಮಾರು 6 ಸಾವಿರ ಮಕ್ಕಳಿಗೆ ಪುಸ್ತಕ ಒದಗಿಸಿದ್ದಾರೆ.

ಪ್ರಸ್ತುತ ಅನಿಲ್‌ ಅಗರ್ವಾಲ್ 70 ಲಕ್ಷ ಪುಸ್ತಕಗಳಿಗೆ ಮಾಲೀಕ ಎನ್ನಬಹುದು. ಗುಜುರಿಗೆ ನೀಡುವ ಪುಸ್ತಕವನ್ನು ಅಗರ್ವಾಲ್‌ ತೆಗೆದುಕೊಂಡು, ಬುಕ್‌ ಬ್ಯಾಂಕ್‌ ಮೂಲಕ ಮಕ್ಕಳಿಗೆ ನೀಡುತ್ತಾರೆ. ದಿಲ್ಲಿ ಹಾಗೂ ಹೊರ ಭಾಗದ ಶಾಲೆಗಳಿಂದ ಪುಸ್ತಕ ಅಗತ್ಯವಿರುವ ಮಕ್ಕಳ ವಿವರ ಪಡೆದು, ಬುಕ್‌ ಬ್ಯಾಂಕ್‌ನಿಂದ ಪುಸ್ತಕ ನೀಡುತ್ತಿದ್ದಾರೆ.

ಪ್ರೇರಣೆ ಏನು?

ತನ್ನ ಮಗಳಿಗೆ 11ನೇ ತರಗತಿಯ ಪುಸ್ತಕಗಳನ್ನು ಖರೀದಿಸಲು ಅಶಕ್ತರಾದ ವೇಳೆ, ಹಿರಿಯ ವಿದ್ಯಾರ್ಥಿಗಳಿಂದ ಅನಿಲ್‌ ಪುಸ್ತಕ ಪಡೆದಿದ್ದಾರೆ. ತನ್ನ ಮಗಳಂತೆ ಬಡ ವಿದ್ಯಾರ್ಥಿಗಳ ಬಗ್ಗೆ ಆಲೋಚಿಸಿದ ಅನಿಲ್‌, ಬುಕ್‌ ಬ್ಯಾಂಕ್‌ ಆರಂಭಿಸಿದ್ದಾರೆ.

ತಮ್ಮಲ್ಲಿರುವ ಪುಸ್ತಕಗಳನ್ನು ಅಗತ್ಯ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುವ ಮೂಲಕ ಅನಿಲ್‌ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಜಮ್ಮು, ಪಠಾಣ್‌ಕೋಟ್‌, ಚೆನ್ನೈ ಹಾಗೂ ಫರೀದಾಬಾದ್‌ನಲ್ಲೂ ಅನಿಲ್‌ ಬುಕ್‌ ಬ್ಯಾಂಕ್‌ ಚಾಲೂ ಮಾಡಿದ್ದಾರೆ.

Comments are closed.