ಹೊಸದಿಲ್ಲಿ : ಪವಿತ್ರ ರಮ್ಜಾನ್ ತಿಂಗಳ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ನಿಲ್ಲಿಸಲಾಗಿದ್ದ ಸೇನಾ ಕಾರ್ಯಾಚರಣೆಯನ್ನು ಪುನರಾರಂಭಿಸಲು ಸರಕಾರ ನಿರ್ಧರಿಸಿದೆ.
ಭಯೋತ್ಪಾದಕರ ವಿರುದ್ಧ ಹೋರಾಡಲು ಯೋಧರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದನ್ನು ಮುಂದುವರಿಸಲು ಸರಕಾರ ನಿರ್ಧರಿಸಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಭದ್ರತಾ ಪಡೆಗಳ ಶಿಫಾರಸಿನನ್ವಯ ಪ್ರಧಾನಿ ನರೇಂದ್ರ ಮೋದಿ ಸರಕಾರ ಈ ನಿರ್ಧಾರ ಕೈಗೊಂಡಿರುವುದಾಗಿ ವರದಿಗಳು ತಿಳಿಸಿವೆ.
ಹಿಜ್ಬುಲ್ ಮುಜಾಹಿದೀನ್ ಉಗ್ರ ಸಮೀರ್ ಟೈಗರ್ ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆಗೈದಿದ್ದ ಸೇನಾ ಜವಾನನ್ನು ಉಗ್ರರು ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಅಪಹರಿಸಿರುವ ಹಿನ್ನೆಲೆಯಲ್ಲಿ ಉಗ್ರರ ವಿರುದ್ಧದ ಸೇನಾ ಕಾರ್ಯಾಚರಣೆಯ ಅಗತ್ಯಕ್ಕೆ ಈಗ ವಿಶೇಷ ಮಹತ್ವ ಲಭಿಸಿದೆ.
ವಿಶ್ವ ಸಂಸ್ಥೆ ವರದಿ ತಿರಸ್ಕರಿಸಿದ ಭಾರತ
ಇದೇ ವೇಳೆ ಇಂದು ಗುರುವಾರ ಭಾರತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ವಿಶ್ವಸಂಸ್ಥೆಯ ವರದಿಯನ್ನು ತಿರಸ್ಕರಿಸಿದೆ. ಇದು ಸಂಪೂರ್ಣ ಸುಳ್ಳು ಮತ್ತು ಪ್ರಚೋದಿತವಾದುದೆಂದು ಭರತ ಹೇಳಿದೆಯಲ್ಲದೆ ಇದರ ಹಿಂದಿನ ಉದ್ದೇಶವನ್ನು ಭಾರತ ಪ್ರಶ್ನಿಸಿದೆ. ಮಾಹಿತಿಗಳ ಸಾಚಾತನವನ್ನು ಪರಾಮರ್ಶಿಸದೆ ಆಯ್ದ ಸಂಗ್ರಹ ಇದಾಗಿದೆ ಎಂದು ವರದಿಯನ್ನು ಭಾರತ ಖಂಡಿಸಿದೆ.
Comments are closed.