ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇಲ್ಲಿನ ಅಧಿಕೃತ ನಿವಾಸದ ಆಗಸದಲ್ಲಿ ಈಚೆಗೆ ಯುಎಫ್ಓ (ನಿಗೂಢ ಬಾಹ್ಯಾಕಾಶ ವಸ್ತು) ಪತ್ತೆಯಾದುದನ್ನು ಅನುಸರಿಸಿ ಭದ್ರತಾ ಪಡೆಗಳಲ್ಲಿ ದಿಗಿಲು, ಆತಂಕ ಉಂಟಾಗಿ ಬಳಿಕ ಟ್ವಿಟರ್‌ನಲ್ಲಿ ಊಹಾಪೋಹಗಳ ನೆರೆಯೇ ಕಂಡು ಬಂತು.
ಪ್ರಧಾನ ಮೋದಿ ನಿವಾಸದ ಆಗಸದಲ್ಲಿ ಕಳೆದ ಜೂನ್ 7ರ ಗುರುವಾರ ನಿಗೂಢ ವಸ್ತು ಕಂಡು ಬಂದಿತ್ತು. ಇದನ್ನು ಕಂಡು ಭದ್ರತಾ ಪಡೆ ಸಿಬಂದಿಗಳು ಕಂಗಾಲಾಗಿದ್ದರು. ಈ ನಿಗೂಢ ವಸ್ತುವಿನಿಂದ ಮೋದಿ ಮೇಲೆ ದಾಳಿಯಾದೀತೇ ಎಂಬ ಭಯ ಅವರನ್ನು ಕಾಡತೊಡಗಿತ್ತು.
ಈ ಯುಎಫ್ಎ ಕಂಡು ಬಂದೊಡನೆಯೇ ಮೋದಿ ನಿವಾಸದ ಭದ್ರತೆಗಿದ್ದ ವಿಶೇಷ ರಕ್ಷಣಾ ಸಮೂಹದ ಅಧಿಕಾರಿಗಳು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡರು.
ಪ್ರಧಾನಿ ಮೋದಿ ಅವರ ನಿವಾಸದ 2 ಕಿ.ಮೀ ಆಗಸದ ಫಾಸಲೆಯು ಭದ್ರತೆಯ ಕಾರಣಕ್ಕೆ ಹಾರಾಟ ರಹಿತ ವಲಯವಾಗಿದೆ. ಯುಎಫ್ಓ ಜೂನ್ 7ರ ರಾತ್ರಿ 7.30ರ ಹೊತ್ತಿಗೆ ದಿಲ್ಲಿಯ ಲೋಕ ಕಲ್ಯಾಣ ಮಾರ್ಗದ ಆಗಸದಲ್ಲಿ ಪತ್ತೆಯಾಗಿತ್ತು.
ಆ ಕೂಡಲೇ ನ್ಯಾಶನಲ್ ಸೆಕ್ಯುರಿಟಿ ಗಾರ್ಡ್, ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್), ದಿಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ದಿಲ್ಲಿ ವಾಯು ಸಾರಿಗೆ ನಿಯಂತ್ರಣ ಘಟಕದ ಅಧಿಕಾರಿಗಳು – ಮುಂತಾಗಿ ಎಲ್ಲರೂ ಕಟ್ಟೆಚ್ಚರದ ಸ್ಥಿತಿಯಲ್ಲಿ ಕ್ರಿಯಾಶೀಲರಾದರು.
ಈ ವಿಷಯ ಭದ್ರತಾ ಅಧಿಕಾರಿಗಳಿಗೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಚಿಂತೆಯ ವಿಷಯವಾಗುತ್ತಲೇ ನಿಗೂಢ ವಸ್ತು ಆಗಸದಿಂದ ನಾಪತ್ತೆಯಾಯಿತು.
ಹಾಗಿದ್ದರೂ ಪ್ರಧಾನಿ ಮೋದಿ ನಿವಾಸದ ಆಗಸದಲ್ಲಿ ಯುಎಫ್ಓ ಪತ್ತೆಯಾಗಿದೆ ಎಂಬ ಸುದ್ದಿ ಹರಡುತ್ತಲೇ ಟ್ವಿಟರಾಟಿಗಳು ತಮ್ಮ ಮನ ಬಂದ ರೀತಿಯ ಊಹಾಪೋಹಗಳನ್ನು ಟ್ವಿಟರ್‌ನಲ್ಲಿ ಹರಿಯಬಿಡತೊಡಗಿದರು. ಶಕುನ, ಅಪಶಕುನ ಮುಂತಾಗಿ ಹಲವು ಬಗೆಯ ಅಭಿಪ್ರಾಯಗಳು ಪುಂಖಾನುಪುಂಖವಾಗಿ ಟ್ವಿಟರ್‌ನಲ್ಲಿ ನೆರೆಯ ರೂಪದಲ್ಲಿ ಹರಿದು ಬಂದವು.
56 ಇಂಚಿನ ಎದೆಯ ವ್ಯಕ್ತಿಯನ್ನು ನಿಕಟದಿಂದ ಕಾಣಲು ಮಂಗಳ ಗ್ರಹವಾಸಿಗಳು ಉತ್ಸುಕರಾಗಿದ್ದಾರೆ ಎಂದು ಮೋಹನ್ ಗುರುಸ್ವಾಮಿ ಎಂಬವರು ಟ್ವೀಟ್ ಮಾಡಿದರು. ಮುಂದೇನು ಗತಿ ಎಂದು ಇನ್ನೊಬ್ಬರು ಚಿಂತೆಗೀಡಾದರು.
ಫಿಟ್‌ನೆಸ್ ಪಾಠಕ್ಕಾಗಿ ಏಲಿಯನ್‌ಗಳು ಮೋದಿ ನಿವಾಸದತ್ತ ಬಂದಿರಬಹುದು ಎಂದು ಗುರ್‌ಮೀತ್ ಅಹ್ಲುವಾಲಿಯಾ ಬರೆದರು. ಅಂದ ಹಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕೃತ ಛತ್ತೀಸ್‌ಗಢದಲ್ಲಿ ಇದ್ದಾರೆ.
Comments are closed.