ಲಖನೌ: ಅಂತರ್ಜಾತಿ ವಿವಾಹವಾಗಿದ್ದ ದಂಪತಿಗಳಿಗೆ ಪಾಸ್ ಪೋರ್ಟ್ ಕಚೇರಿ ಅಧಿಕಾರಿಯೊಬ್ಬ ಅವಮಾನ ಮಾಡಿರುವ ಘಟನೆಯೊಂದು ಉತ್ತರಪ್ರದೇಶದ ಲಖನೌನಲ್ಲಿ ನಡೆದಿದೆ.
ದಂಪತಿಗಳು ಹಿಂದು-ಮುಸ್ಲಿಂ ಆಗಿದ್ದು, ದಂಪತಿಗಳಿಗೆ ಪಾಸ್’ಪೋರ್ಟ್ ನೀಡಲು ನಿರಾಕರಿಸಿರುವ ಅಧಿಕಾರಿ, ಮಹಿಳೆಯ ಪತಿಗೆ ಮತಾಂತರಗೊಳ್ಳುವಂತೆ ತಿಳಿಸಿರುವುದು ಇದೀಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಪಾಸ್’ಪೋರ್ಟ್ ಕಚೇರಿ ಅಧಿಕಾರಿ ಮಾಡಿದ ಅವಮಾನ ಕುರಿತಂತೆ ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದು, ಅಧಿಕಾರಿ ವಿರುದ್ಧ ಕೈಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ತಾನ್ವಿ ಸೇಠ್ ಮತ್ತು ಮೊಹಮ್ಮದ್ ಅನಸ್ ಸಿದ್ದಿಕ್ಕಿ ಅವರು 2007ರಲ್ಲಿ ವಿವಾಹವಾಗಿದ್ದು, ಪಾಸ್ ಪೋರ್ಟ್ ಪಡೆಯುವ ಸಲುವಾಗಿ ಲಖನೌ ಪಾಸ್ ಪೋರ್ಟ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಇದರಂತೆ ಕಚೇರಿಗೆ ಬಂದಿದ್ದ ದಂಪತಿಗಳನ್ನು ವಿಕಾಸ್ ಮಿಶ್ರಾ ಎಂಬ ಅಧಿಕಾರಿ ನಿಂದಿಸಿದ್ದಲ್ಲದೆ, ಹಿಂದು ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಹಿಳೆಯ ಪತಿಗೆ ತಿಳಿಸಿದ್ದಾರೆ.
ಪಾಸ್ ಪೋರ್ಟ್ ಪಡೆಯುವ ಸಲುವಾಗಿ ಸಂದರ್ಶನಕ್ಕೆ ಹೋಗಿದ್ದ ಸಂದರ್ಭದಲ್ಲಿ ಪತಿಯ ಹೆಸರನ್ನು ನೋಡಿದ ಕೂಡಲೇ ಅಧಿಕಾರಿ ಕೂಗಾಡಲು ಆರಂಭಿಸಿದ್ದ. ಎಲ್ಲರ ಮುಂದೆ ನಿಂದಿಸಲು ಆರಂಭಿಸಿದ್ದ.
ನೀವು ಮುಸ್ಲಿಮರೊಂದಿಗೆ ವಿವಾಹವಾಗಿದ್ದೀರಿ. ಹಾಗಿದ್ದರೆ, ನಿಮ್ಮ ಹೆಸರು ತಾನ್ವಿ ಸೇಠ್ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.
ಇದು ನನ್ನ ವೈಯಕ್ತಿಕ ಆಯ್ಕೆ. ವಿವಾಹದ ಬಳಿಕ ನನ್ನ ಹೆಸರನ್ನು ಬದಲಿಸುವುದು, ಬಿಡುವುದು ನನ್ನ ಆಯ್ಕೆಗೆ ಸಂಬಂಧಿಸಿದ್ದು. ವಿವಾಹದ ಬಳಿಕ ಮಹಿಳೆ ಹೆಸರು ಬದಲಾಯಿಸಿಕೊಳ್ಳಬೇಕೆಂದು ಯಾವುದೇ ಕಾನೂನುಗಳಿಲ್ಲ. ನಾವಿಬ್ಬರೂ ವಿವಾಹವಾಗಿ 12 ವರ್ಷಗಳಾಗಿವೆ. ನನ್ನ ಬಳಿಯಿರುವ ಎಲ್ಲಾ ದಾಖಲೆಗಳು ಹುಟ್ಟಿದ ಹೆಸರಿನಲ್ಲಿಯೇ ಇವೆ ಎಂದು ಅಧಿಕಾರಿಗೆ ತಿಳಿಸಿದೆ.
ಈ ವೇಳೆ ಕೂಗಾಡಲು ಆರಂಭಿಸಿದ ಅಧಿಕಾರಿ, ವಿವಾಹದ ಬಳಿಕ ಹೆಸರು ಬದಲಿಸಿಕೊಳ್ಳುವುದು ನಿನ್ನ ಕರ್ತವ್ಯ. ಪ್ರತೀಯೊಂದು ಹೆಣ್ಣು ಮಗಳೂ ಅದನ್ನು ಮಾಡುತ್ತಾರೆಂದು ತಿಳಿಸಿದರು. ಬಳಿಕ ಸುದೀರ್ಘವಾಗಿ ಎಲ್ಲರೆದಿರೂ ನನ್ನನ್ನು ಜೋರಾಗಿ ನಿಂದಿಸಲು ಆರಂಭಿಸಿದರು. ಕಚೇರಿಯಲ್ಲಿದ್ದ ಪ್ರತೀಯೊಬ್ಬರೂ ನನ್ನನ್ನು ನೋಡುತ್ತಲೇ ಇದ್ದರು. ನನಗೆ ಬಹಳ ಅವಮಾನವಾಯಿತು. ದುಃಖ ತಡೆಯಲಾಗದೆ ಜೋರಾಗಿ ಅಳಲು ಆರಂಭಿಸಿದ್ದೆ. ನನಗೆ ಉಸಿರಾಟದ ಸಮಸ್ಯೆಯಿದ್ದು, ಈ ವೇಳೆ ನನಗೆ ಉಸಿರಾಟದ ಸಮಸ್ಯೆ ಕೂಡ ಎದುರಾಯಿತು.
ಇದಾದ ಬಳಿಕ ಎಪಿಒ ಕಚೇರಿಕೆ ತೆರಳಿದಾಗ ಅಲ್ಲಿದ್ದ ಅಧಿಕಾರಿಗಳು ಎಲ್ಲವನ್ನೂ ಅರ್ಥ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ದಾಖಲೆಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳಿಲ್ಲ ಎಂದು ತಿಳಿಸಿದರು. ಬಳಿಕ ಮಿಶ್ರಾ ಪರವಾಗಿ ಅವರು ಕ್ಷಮೆಯಾಚಿಸಿದರು. ಈ ರೀತಿಯ ಘಟನೆ ನಡೆಯುತ್ತಿರುವುದು ಇದು ಮೊದಲೇನಲ್ಲ. ಹಲವು ಬಾರಿಯಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಬಂದ ಪತಿ ಅವರ ಪಾಸ್ ಪೋರ್ಟ್ ಕೂಡ ಹೋಲ್ಡ್ ನಲ್ಲಿರಿಸಿರುವುದಾಗಿ ತಿಳಿಸಿದರು.
ಈ ಮೊದಲೇ ನನ್ನ ಪತಿ ಬಳಿ ಪಾಸ್’ಪೋರ್ಟ್ ಇತ್ತು. ಆದರೆ, ಪಾಸ್ ಪೋರ್ಟ್ ಮರು ಪಡೆಯುವ ಸಲುವಾಗಿ ಕಚೇರಿಗೆ ಬಂದಿದ್ದರು. ಅವರ ಬಳಿ ಇದ್ದ ಎಲ್ಲಾ ದಾಖಲೆಗಳು ಸರಿಯಾಗಿದ್ದವು. ಅವರ ಪಾಸ್’ಪೋರ್ಟ್ ಹೋಲ್ಡ್ ಮಾಡಲು ಯಾವುದೇ ರೀತಿಯ ಕಾರಣಗಳಿರಲಿಲ್ಲ. ಸಂಗಾತಿಯ ಹೆಸರಿನ ಭಾಗದಲ್ಲಿ ನನ್ನ ಹೆಸರಿರುವುದಕ್ಕೆ ಪತಿಯ ಪಾಸ್’ಪೋರ್ಟ್’ನ್ನು ಹೋಲ್ಡ್ ನಲ್ಲಿರಿಸಲಾಗಿದೆ. ಮುಸ್ಲಿಂ ಹೆಸರಿಲ್ಲದೆಯೇ ಅವರನ್ನು ನಾನು ಹೇಗೆ ವಿವಾಹವಾಗಲು ಸಾಧ್ಯ.
ಮುಸ್ಲಿಂ ಹೆಸರಿನಲ್ಲಿಯೇ ಎಲ್ಲಾ ದಾಖಲೆಗಳು ಸರಿಯಾಗಿವೆ. ಇದೊಂದು ನೈತಿಕ ಪೊಲೀಸ್ ಗಿರಿ ಎಂಬುದು ಸ್ಪಷ್ಟವಾಗಿ ತೋರುತ್ತಿದೆ. 4 ವರ್ಷಗಳಲ್ಲಿ ರಾಯಭಾರಿ ಕಚೇರಿ ಮಾಡುತ್ತಿರುವ ಕಾರ್ಯಗಳನ್ನು ಗಮನಿಸಿದ್ದೇನೆ. ಸಚಿವಾಲಯದ ಮೇಲೆ ನನಗೆ ನಂಬಿಕೆಯಿರುವುದರಿಂದ ನಿಮಗೆ ಪತ್ರ ಬರೆಯುತ್ತಿದ್ದೇನೆ. ನಮ್ಮ ಸಮಸ್ಯೆ ಬಗೆಹರಿಸಿ ಪಾಸ್’ಪೋರ್ಟ್ ಕೊಡಿಸಿ. ನನಗಾದ ಕಿರಿಕುಳ ಹಾಗೂ ನಿಂದನೆಗಳು ಮತ್ತಾವುದೇ ಮಹಿಳೆ ಹಾಗೂ ನಾಗರೀಕನಿಗೂ ಆಗಬಾರದು, ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ದಂಪತಿಗಳ ಮನವಿಗೆ ಸ್ಪಂದನೆ ನೀಡಿರುವ ವಿದೇಶಾಂಗ ಸಚಿವಾಲ ಇದೀಗ ದಂಪತಿಗಳಿಗೆ ಪಾಸ್’ಪೋರ್ಟ್ ನೀಡಿದೆ ಎಂದು ವರದಿಗಳು ತಿಳಿಸಿವೆ.
ಪಾಸ್ ಪೋರ್ಟ್ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳೆ, ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಸ್ಪಂದನೆ ನೀಡಿರುದಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಪಾಸ್ ಪೋರ್ಟ್ ಕಚೇರಿಯ ಅಧಿಕಾರಿ ಮಿಶ್ರಾ ಅವರು ನನಗೆ ಅವಮಾನ ಮಾಡಿದರು. ನಾವಿಬ್ಬರೂ ವಿವಾಹವಾಗಿ 12 ವರ್ಷಗಳಾಗಿದ್ದು, ಇದೂವರೆಗೂ ನಾನು ಇಂತಹ ಅವಮಾನವನ್ನು ಎದುರಿಸಿರಲಿಲ್ಲ. ಅಧಿಕಾರಿಗಳು ಇದೀಗ ಕ್ಷಮೆಯಾಚಿಸಿದ್ದು, ನಮಗೆ ನಮ್ಮ ಪಾಸ್’ಪೋರ್ಟ್ ದೊರೆದಿತು ಎಂದು ತಿಳಿಸಿದ್ದಾರೆ.
Comments are closed.