ನವದೆಹಲಿ: ಆಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ವಾಯು ಸೇನೆಯ ಯೋಧರು ಆಗಸದಲ್ಲೇ ಯೋಗಾಭ್ಯಾಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದ ವಿಶ್ವ ಯೋಗದಿನ ಆಚರಿಸಲಾಗಿದ್ದು, ತಾವು ಇರುವ ವಾತಾವರಣದಲ್ಲಿಯೇ ಯೋಗಾಸಗಳನ್ನು ಮಾಡುವ ಮೂಲಕ ಭಾರತೀಯ ಸೈನಿಕರು ಜಗತ್ತಿನ ಜನರ ಗಮನ ಸೆಳೆದಿದ್ದಾರೆ.
ಇನ್ನು ಭಾರತೀಯ ವಾಯು ಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರಾದ ಸ್ಯಾಮಲ್ ಹಾಗೂ ಗಜಾನಂದ್ ಯಾದವ್ ಅವರು ಆಕಾಶದಲ್ಲಿ ಯೋಗಾಸನ ಪ್ರದರ್ಶಿಸಿದರು. ಸುಮಾರು 15 ಸಾವಿರ ಅಡಿ ಮೇಲೆ ಯೋಧರು ವಾಯು ನಮಸ್ಕಾರ ಮತ್ತು ಪದ್ಮಾಸನ ಹಾಕುವ ಮೂಲಕ ಯೋಗ ದಿನಾಚರಣೆ ಆಚರಿಸಿದರು.
ಯೋಧರ ಈ ಸಾಹಸದ ಯೋಗವನ್ನು ವಾಯುಸೇನೆ ತನ್ನ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಅವರ ಫೋಟೋ ಕೆಳಗೆ “ಇದು ಉತ್ತಮ ಆರೋಗ್ಯ, ಸಂತೋಷ, ಸಾಮರಸ್ಯ ಮತ್ತು ಐಎಎಫ್ ಏರ್ ವಾರಿಯರ್ ಶಾಂತಿಯ ಸಂದೇಶ. ಆಕಾಶದಲ್ಲಿ ಯೋಗಾಭ್ಯಾಸ ಮಾಡುತ್ತಿರುವ ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ಸ್ ಟ್ರೈನಿಂಗ್ ಸ್ಕೂಲ್ ನ ತರಬೇತುದಾರರು” ಎಂದು ಬರೆದು ಐಎಎಫ್ ಟ್ವೀಟ್ ಮಾಡಿದೆ.
Comments are closed.