ರಾಷ್ಟ್ರೀಯ

ವಿವಾದವಾದ ಭಾರತ ಕ್ರಿಕೆಟಿಗರಿಗೆ ನಡೆಸಲಾಗುತ್ತಿರುವ ಯೋ ಯೋ ಫಿಟ್ನೆಸ್ ಪರೀಕ್ಷೆ

Pinterest LinkedIn Tumblr

ನವದೆಹಲಿ: ಭಾರತ ಕ್ರಿಕೆಟಿಗರಿಗೆ ನಡೆಸಲಾಗುತ್ತಿರುವ ಕಡ್ಡಾಯ ಯೋ ಯೋ ಫಿಟ್ನೆಸ್ ಪರೀಕ್ಷೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದೆ. ಅಮೋಘ ಫಾರ್ಮ್ ಕಾರಣಕ್ಕೆ ತಂಡಕ್ಕೆ ಆಯ್ಕೆಯಾಗಿದ್ದರೂ ಯೋ ಯೋದಲ್ಲಿ ವಿಫ‌ಲವಾಗಿ ಅಂಬಾಟಿ ರಾಯುಡು ತಂಡದಿಂದ ಹೊರಬಿದ್ದಿದ್ದಾರೆ.

ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್‌ ಕೂಡ ಫಿಟ್ನೆಸ್ ಪರೀಕ್ಷೆಯಲ್ಲಿ ವಿಫ‌ಲರಾಗಿ ಸ್ಥಾನ ಕಳೆದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ಬಿಸಿಸಿಐ ಆಡಳಿತಾಧಿಕಾರಿ ವಿನೋದ್‌ ರಾಯ್‌ ಕೂಡ ಪ್ರಶ್ನಿಸಿದ್ದಾರೆ.

ಯೋ ಯೋ ಒಂದೇ ಫಿಟ್ನೆಸ್ ಮಾನದಂಡವಾಗಬೇಕೆ, ಅದೇ ಕಡ್ಡಾಯವಾಗಲು ಕಾರಣವೇನು ಎಂದು ವಿನೋದ್‌ ರಾಯ್‌ ಪ್ರಶ್ನಿಸಿದ್ದಾರೆಂದು ಮೂಲಗಳು ಹೇಳಿವೆ. ಇದುವರೆಗೆ ವಿನೋದ್‌ ಈ ಸಂಬಂಧ ಮಧ್ಯಪ್ರವೇಶ ಮಾಡಿಲ್ಲ. ಅವರು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ
ತರಬೇತುದಾರರ ಬಳಿ ವಿವರಣೆ ಕೇಳಲಿದ್ದಾರೆ. ಅದಾದ ಬಳಿಕ ಅವರು ನಿರ್ಧಾರಕ್ಕೆ ಬರಲಿದ್ದಾರೆಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋ ಯೋ ಪರೀಕ್ಷೆ ವಿವಾದಾತ್ಮಕ ಸ್ವರೂಪ ಪಡೆದ ನಂತರ ಹಲವರು ಅದನ್ನು ಖಂಡಿಸಿದ್ದಾರೆ. ಸ್ವತಃ ಬಿಸಿಸಿಐ ಖಜಾಂಚಿ ಅನಿರುದ್ಧ ಚೌಧರಿ ಅವರು ಆಡಳಿತಾಧಿಕಾರಿಗೆ ಪತ್ರ ಬರೆದು, ಯೋ ಯೋ ಕಡ್ಡಾಯವಾಗಿದ್ದು ಯಾವಾಗ, ಹೇಗೆ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ಕಡೆ ಮಾಜಿ ಕ್ರಿಕೆಟಿಗ ಸಂದೀಪ್‌ ಪಾಟೀಲ್‌ ಕೂಡ ಯೋ ಯೋ ಬಗ್ಗೆ ಕಿಡಿಕಾರಿದ್ದಾರೆ. ಕ್ರಿಕೆಟಿಗರ ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ ಎಂದು ಕಟುವಾಗಿ ಹೇಳಿದ್ದಾರೆ.

Comments are closed.