ರಾಷ್ಟ್ರೀಯ

ಮೂರು ದಿನಗಳ ಕಾಲ ರಾತ್ರಿ ವೇಳೆ ಸ್ಮಶಾನದಲ್ಲಿ ಮಲಗಿದ ಶಾಸಕ ! ಕಾರಣವೇನು ಗೊತ್ತೇ…?

Pinterest LinkedIn Tumblr

ಹೈದರಾಬಾದ್: ಮೂಡ ನಂಬಿಕೆ ವಿರುದ್ಧ ಹೋರಾಡಿ ಸ್ಥಳೀಯ ಗ್ರಾಮಸ್ಥರಲ್ಲಿದ್ದ ಭಯ ಹೋಗಲಾಡಿಸಲು ಶಾಸಕರೊಬ್ಬರು ಸ್ಮಶಾನದಲ್ಲಿ ಮಲಗಿ ರಾತ್ರೋ ರಾತ್ರಿ ಹೀರೋ ಆಗಿದ್ದಾರೆ.

ಟಿಡಿಪಿ ಶಾಸಕ ನಿಮ್ಮಲ ರಾಮ ನಾಯ್ಡು ಅವರು ತಮ್ಮ ಊರಿನ ಸ್ಮಶಾನನೊಂದರ ಕಟ್ಟಡವನ್ನು ನವೀಕರಿಸಲು ಬಯಸಿದ್ದರು. ಆದರೆ ಊರಿನ ಯಾರೊಬ್ಬರು ಈ ನವೀಕರಣ ಕಾಮಗಾರಿಗೆ ಬರಲು ಸಿದ್ಧರಿರಲ್ಲ. ರುದ್ರಭೂಮಿಯಲ್ಲಿ ಭೂತ ಪ್ರೇತಗಳು ಇರುತ್ತವೆ ಎಂಬ ಭಯವೇ ಇದಕ್ಕೆ ಕಾರಣವಾಗಿತ್ತು.

ಜನರ ಮನಸಲ್ಲಿದ್ದ ಭಯವನ್ನು ಹೋಗಲಾಡಿಸಲು ಶಾಸಕ ನಾಯ್ಡು ಅವರು ಜೂನ್‌ 22ರಿಂದ ನಿರಂತರ ಮೂರು ದಿನಗಳ ಕಾಲ ರಾತ್ರಿ ವೇಳೆ ಶ್ಮಶಾನದಲ್ಲೇ ಮಲಗಿದರು. ಆ ಮೂಲಕ ಶ್ಮಶಾನದ ಒಳಗಾಗಲೀ ಹೊರಗಾಗಲೀ ಭೂತ ಪ್ರೇತಗಳು ಇಲ್ಲವೇ ಇಲ್ಲ ಎಂಬುದನ್ನು ಶಾಸಕ ನಾಯ್ಡು ಜನರಿಗೆ ಮನವರಿಕೆ ಮಾಡುವಲ್ಲಿ ಸಫ‌ಲರಾದರು.

ಪಶ್ಚಿಮ ಗೋದಾವರಿಯ ಪಲಕೋಳೆ ಪಟ್ಟಣದ ರುದ್ರಭೂಮಿಯಲ್ಲಿ ತೀವ್ರ ನುಸಿ ಕಾಟ ಇದ್ದ ಹೊರತಾಗಿಯೂ ಶಾಸಕ ನಾಯ್ಡು ಅವರು ಮುಕ್ತ ಬಯಲಲ್ಲಿ, ಆಗಸದಡಿ, ಕೇವಲ ಫೋಲ್ಡಿಂಗ್‌ ಕಾಟ್‌ ಬಳಿಸಿ, ಮೂರು ರಾತ್ರಿ ನಿದ್ದೆ ಮಾಡಿದ್ದಾರೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಾಸಕ ನಾಯ್ಡು ಅವರು ಮೂಢನಂಬಿಕೆ ವಿರುದ್ಧ ನಡೆಸಿರುವ ಹೋರಾಟವನ್ನು ಪ್ರಶಂಸಿಸಿದ್ದಾರೆ. ಇನ್ನೂ ತಮ್ಮ ಶಾಸಕರ ಧೈರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Comments are closed.