ರಾಷ್ಟ್ರೀಯ

ವಿದ್ಯಾರ್ಥಿಗಳ ಕಣ್ಣೀರಿಗೆ ಕರಗಿ ಶಿಕ್ಷಕನ ವರ್ಗಾವಣೆ ರದ್ದುಪಡಿಸಿದ ಸರಕಾರ!

Pinterest LinkedIn Tumblr


ಚೆನ್ನೈ: ವಿದ್ಯಾರ್ಥಿಗಳ ಬೇಡಿಕೆಗೆ ಮಣಿದಿರುವ ತಮಿಳುನಾಡು ಸರಕಾರ ತಿರುವಳ್ಳೂರಿನ ವೆಲ್ಲಿಯುಗರಂ ಸರಕಾರಿ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕ ಭಗವಾನ್ ವರ್ಗಾವಣೆಯನ್ನು ರದ್ದು ಮಾಡಿದೆ. ಇತ್ತೀಚೆಗೆ ಭಗವಾನ್‌ರನ್ನು ತಿರುತ್ತಣಿಗೆ ವರ್ಗವಣೆ ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳು ನಮಗೆ ಈ ಶಿಕ್ಷಕರೇ ಬೇಕು ಎಂದು ಹಠ ಹಿಡಿದು, ಶಿಕ್ಷಕರು ಹೊರಡುತ್ತಿರಬೇಕಾದರೆ ಶಾಲೆ ಗೇಟ್ ಬಳಿಯೇ ಅವರನ್ನು ತಬ್ಬಿ ಕಣ್ಣೀರಿಟ್ಟಿದ್ದರು.

“ಸಾರ್ ನಮ್ಮನ್ನು ಬಿಟ್ಟು ಹೋಗಬೇಡಿ” ವಿದ್ಯಾರ್ಥಿಗಳು ಕಣ್ಣೀರಿಡುತ್ತಿರುವ ವೀಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಈ ಘಟನೆ ಬಳಿಕ ಹತ್ತು ದಿನಗಳ ಕಾಲ ಭಗವಾನ್ ಅವರ ವರ್ಗಾವಣೆಯನ್ನು ತಡೆಹಿಡಿದಿತ್ತು ಅಲ್ಲಿನ ಶಿಕ್ಷಣ ಇಲಾಖೆ.

ಇದೀಗ ಶಿಕ್ಷಕರ ಮೇಲಿನ ವಿದ್ಯಾರ್ಥಿಗಳ ಪ್ರೀತಿಗೆ ಮಣಿದಿರುವ ಶಿಕ್ಷಣ ಇಲಾಖೆ ಭಗವಾನ್ ಅವರ ವರ್ಗಾವಣೆಯನ್ನೇ ರದ್ದು ಮಾಡಿದೆ. ಸರಕಾರದ ಈ ನಿರ್ಧಾರಕ್ಕೆ ವೆಲ್ಲಿಯುಗರಂ ಶಾಲೆಯ ವಿದ್ಯಾರ್ಥಿಗಳು ಫುಲ್ ಖುಷಿಯಾಗಿದ್ದಾರೆ. ವೆಲ್ಲಿಯುಗರಂ ಶಾಲೆಯಲ್ಲೇ ಮುಂದುವರೆಯುವಂತೆ ಮಾಡಿದೆ.

ಏನಿದು ಘಟನೆ?
ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯ ವೆಲ್ಲಿಯಗರಂ ಎಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಅದು. ಸರಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಮ್ಯಾಥ್ಸ್ ಎಂದರೆ ಭಯ ಇದ್ದೇ ಇರುತ್ತದೆ. ಒಳ್ಳೆಯ ಗಣಿತದ ಮೇಷ್ಟು ಸಿಗುವುದು ಕಷ್ಟ. ಇನ್ನು ಇಂಗ್ಲಿಷ್ ಮೇಷ್ಟ್ರು ಸಿಗುವುದು ದೂರದ ಮಾತಾಯಿತು. ಈ ಶಾಲೆಯ ವಿದ್ಯಾರ್ಥಿಗಳದ್ದೂ ಇದೇ ಪರಿಸ್ಥಿತಿ.

ಭಗವಾನ್ ಅವರು ಇಂಗ್ಲಿಷ್ ಶಿಕ್ಷಕರಾಗಿ ನಾಲ್ಕು ವರ್ಷಗಳ ಹಿಂದೆ ಆ ಶಾಲೆಗೆ ಅಡಿಯಿಟ್ಟ ಬಳಿಕ ಅಲ್ಲಿನ ಪರಿಸ್ಥಿತಿ ಸಂಪೂರ್ಣ ಬದಲಾಯಿತು. ಇಂಗ್ಲಿಷ್ ಎಂದರೆ ವಿದ್ಯಾರ್ಥಿಗಳಲಿದ್ದ ಭಯವನ್ನು ಅವರು ಹೊಡೆದೋಡಿಸಿದರು. ಆಗಿಂದಾಗ್ಗೆ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುತ್ತಾ, ನಿತ್ಯ ಅವರಿಗೆ ಎಟುವಂತಿದ್ದರು.

ಸಂಜೆ ಹೊತ್ತು ವಿಶೇಷ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಕೇವಲ ಪಠ್ಯವನ್ನಷ್ಟೇ ಅಲ್ಲದೆ, ಸಾಮಾನ್ಯ ಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ, ತಿಳುವಳಿಕೆ ನೀಡುತ್ತಿದ್ದರು. ಸಮಾಜ ಸೇವೆ ಬಗ್ಗೆ ವಿವರಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಓರ್ವ ಅಣ್ಣನಾಗಿ, ಮಾರ್ಗದರ್ಶಕನಾಗಿ, ದಾರಿ ತೋರುವ ಗುರುವಾಗಿ ಅವರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹಾಗಾಗಿ ಭಗವಾನ್ ಜತೆಗೆ ಅಲ್ಲಿನ ವಿದ್ಯಾರ್ಥಿಗಳಿಗೆ ಅವಿನಾಭಾವ ಸಂಬಂಧ ಏರ್ಪಟ್ಟಿತ್ತು.

Comments are closed.