ವಿಜಯವಾಡ: ತಮ್ಮ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಬೆದರಿಕೆ ಒಡ್ಡಿದ ಆರೋಪದ ಮೇಲೆ ಕೃಷ್ಣಾ ಜಿಲ್ಲೆಯ ಎನ್‌ಆರ್‌ಐ ಇಂಜಿನಿಯರಿಂಗ್ ಕಾಲೇಜಿನ ಮೂವರು ಮಾಜಿ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದೆ.
ಅಗಿರಿಪಳ್ಳಿ ಮಂಡಲದ ಪೊಟವರಪ್ಪಡು ಗ್ರಾಮದಲ್ಲಿ ಫೆಬ್ರವರಿ 2017ರಲ್ಲಿ ಈ ಪ್ರಕರಣ ನಡೆದಿದ್ದು, ಆ ಸಂದರ್ಭದಲ್ಲಿ ಯುವತಿ ಬಿಟೆಕ್ ಅಂತಿಮ ವರ್ಷದಲ್ಲಿ ಓದುತ್ತಿದ್ದಳು. ಸಂತ್ರಸ್ತೆಯ ತಂದೆ ಶುಕ್ರವಾರ ಈ ಕುರಿತು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಫೆಬ್ರವರಿ 2017ರಲ್ಲಿ ಹೋಟೆಲ್ ಒಂದರಲ್ಲಿ ನಡೆದ ಬರ್ತಡೇ ಪಾರ್ಟಿಗೆ ಬರುವಂತೆ ಯುವತಿಗೆ ಆಕೆಯ ಸ್ನೇಹಿತರಾದ ಶಿವ ರೆಡ್ಡಿ, ಕೃಷ್ಣ ವಂಶಿ ಆಹ್ವಾನ ನೀಡಿದ್ದರು. ಕರೆಗೆ ಸ್ಪಂದಿಸಿ ಪಾರ್ಟಿಗೆ ಆಗಮಿಸಿದ್ದ ಆಕೆಗೆ ಮಾದಕ ದ್ರವ್ಯ ಬೆರೆಸಿದ್ದ ತಂಪು ಪಾನೀಯ ಕುಡಿಸಿದ್ದ ಆರೋಪಿಗಳು, ಪ್ರಜ್ಞೆ ತಪ್ಪಿದ ಮೇಲೆ ಅತ್ಯಾಚಾರ ಎಸಗಿದ್ದರು. ತಮ್ಮ ಹೀನ ಕೃತ್ಯವನ್ನು ಚಿತ್ರೀಕರಿಸಿಕೊಂಡು ತಮ್ಮ ಕೆಲ ಸ್ನೇಹಿತರ ಜತೆ ಹಂಚಿಕೊಂಡಿದ್ದರು. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಸಹ ಪೋಸ್ಟ್ ಮಾಡಿದ್ದರು. ವೀಡಿಯೋದಲ್ಲಿ ತಮ್ಮ ಮುಖವನ್ನು ಬ್ಲರ್ ಮಾಡಿದ್ದ ಆರೋಪಿಗಳು ಯುವತಿಯ ಮುಖವನ್ನು ಮಾತ್ರ ಹಾಗೆಯೇ ಬಿಟ್ಟಿದ್ದರು. ವೀಡಿಯೋ ನೋಡಿದ ಸ್ನೇಹಿತನೊಬ್ಬ ಇದನ್ನು ಸಂತ್ರಸ್ತ ಯುವತಿಗೆ ತಿಳಿಸಿದ್ದಾನೆ. ತಕ್ಷಣ ತನ್ನ ಪೋಷಕರಿಗೆ ಮಾಹಿತಿ ನೀಡಿದ ಆಕೆ ಕಾಲೇಜು ಆಡಳಿತ ಮಂಡಳಿಯಲ್ಲಿ ಸಹ ದೂರು ನೀಡಿದ್ದಳು. ಆಡಳಿತ ಮಂಡಳಿ ಆ ವೀಡಿಯೋವನ್ನು ಎಲ್ಲರ ಮೊಬೈಲ್‌ನಿಂದ ಡಿಲಿಟ್ ಮಾಡಿಸಿತ್ತು.
ಆದರೆ ಯುವತಿಯ ಮೇಲಿನ ದೌರ್ಜನ್ಯ ಇಲ್ಲಿಗೆ ಕೊನೆಯಾಗಲಿಲ್ಲ. ಕಳೆದ ಕೆಲ ತಿಂಗಳ ಹಿಂದೆ ಯುವತಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದು, ತನ್ನ ಜತೆ ನಡೆದ ಕೆಟ್ಟ ಕೃತ್ಯವನ್ನು ಮರೆಯಲೆತ್ನಿಸುತ್ತಿದ್ದ ಆಕೆಗೆ ಮತ್ತೊಂದು ಆಘಾತ ಕಾದಿತ್ತು. ಆಕೆಯ ಇನ್ನೊಬ್ಬ ಸಹಪಾಠಿ ಪ್ರವೀಣ್ ಎಂಬಾತ ತನ್ನ ಬಳಿ ಅತ್ಯಾಚಾರದ ವೀಡಿಯೋ ಇರುವುದಾಗಿ ಬೆದರಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಕಾಡತೊಡಗಿದ.
ಆತನ ಕಿರುಕುಳ ಸಹಿಸದಾದಾಗ ಸಂತ್ರಸ್ತೆಯ ಪೋಷಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮತ್ತೀಗ ಒಂದು ವರ್ಷದ ಹಿಂದೆ ನಡೆದ ಪ್ರಕರಣ ಆರೋಪಿಗಳಾದ ಕೃಷ್ಣ ವಂಶಿ, ಶಿವ ರೆಡ್ಡಿ ಮತ್ತು ಬೆದರಿಕೆ ಒಡ್ಡುತ್ತಿರುವ ಡಿ ಪ್ರವೀಣ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ
Comments are closed.