ರಾಷ್ಟ್ರೀಯ

ಕೇವಲ 1 ರೂಪಾಯಿ ಬಾಕಿ ಇದ್ದ ಹಿನ್ನೆಲೆಯಲ್ಲಿ ಅಡವಿಟ್ಟಿದ್ದ ಚಿನ್ನವನ್ನು ನೀಡಲು ನಿರಾಕರಿಸಿದ ಬ್ಯಾಂಕ್ !

Pinterest LinkedIn Tumblr

ಚೆನ್ನೈ: ವಿಜಯ್ ಮಲ್ಯರಂತಹ ಉದ್ಯಮಿಗಳು ಸಾವಿರಾರು ಕೋಟಿ ರೂಪಾಯಿ ಬ್ಯಾಂಕ್ ಸಾಲಕ್ಕೆ ಸುಸ್ತಿದಾರರಾಗಿ ಆರಾಮಾಗಿದ್ದಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಬ್ಯಾಂಕ್ ಸಾಲ ಮರುಪಾವತಿಗೆ ಕೇವಲ 1 ರೂಪಾಯಿ ಬಾಕಿ ಇದ್ದ ಹಿನ್ನೆಲೆಯಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಅದರ ಮಾಲಿಕರಿಗೆ ನೀಡಲು ಬ್ಯಾಂಕ್ ನಿರಾಕರಿಸಿದೆ.

ಕಂಚೀಪುರಂ ಕೋ-ಆಪರೇಟೀವ್ ಬ್ಯಾಂಕ್ ನ ಅಧಿಕಾರಿಗಳು ತಮ್ಮಲ್ಲಿ 138 ಗ್ರಾಂ ಚಿನ್ನಾಭರಣಗಳನ್ನು ಅಡವಿಟ್ಟು ಹಣ ಪಡೆದಿದ್ದ ವ್ಯಕ್ತಿ ಅದನ್ನು ವಾಪಸ್ ಬಿಡಿಸಿಕೊಳ್ಳುವ ವೇಳೆ ಇನ್ನೂ 1 ರೂಪಾಯಿ ಬಾಕಿ ನೀಡಬೇಕೆಂಬ ಕಾರಣ ನೀಡಿ ಚಿನ್ನಾಭರಣಗಳನ್ನು ವಾಪಸ್ ನೀಡಲು ನಿರಾಕರಿಸಿದ್ದಾರೆ. ಸಹಕಾರಿ ಬ್ಯಾಂಕ್ ನ ಈ ನಡೆಯ ವಿರುದ್ಧ ಬ್ಯಾಂಕ್ ಗ್ರಾಹಕ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

“3.50 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ಬ್ಯಾಂಕ್ ನಿಂದ ಬಿಡಿಸಿಕೊಳ್ಳುವುದಕ್ಕೆ ಕಳೆದ 5 ವರ್ಷಗಳಿಂದ ಅಲೆಯುತ್ತಿದ್ದೇನೆ, ನನ್ನ ಚಿನ್ನಾಭರಣಗಳನ್ನು ವಾಪಸ್ ನೀಡಲು ಬ್ಯಾಂಕ್ ಗೆ ನಿರ್ದೇಶನ ನೀಡಬೇಕೆಂದು ಸಹಕಾರಿ ಬ್ಯಾಂಕ್ ನ ಪಲ್ಲಾವರಂ ಶಾಖೆಯ ಸದಸ್ಯರಾಗಿರುವ ಸಿ ಕುಮಾರ್ ಮದ್ರಾಸ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಜೂ.29 ರಂದು (ಶುಕ್ರವಾರ) ಅರ್ಜಿಯ ವಿಚಾರಣೆ ಕೋರ್ಟ್ ಮುಂದೆ ಬಂದಿದ್ದು, ನ್ಯಾ.ಟಿ ರಾಜ ಅರ್ಜಿದಾರರ ಪರ ವಕೀಲರು ದಾಖಲುಪಡಿಸಿದ್ದ ಅಂಶಗಳನ್ನು ಪರಿಗಣಿಸಿದ್ದಾರೆ. ಇದೇ ವೇಳೆ ಸರ್ಕಾರಿ ಅಡ್ವೊಕೇಟ್ ಗೆ ಅಧಿಕಾರಿಗಳಿಂದ ಎರಡುವಾರಗಳಲ್ಲಿ ಸೂಚನೆಗಳನ್ನು ಪಡೆಯುವಂತೆ ಸೂಚಿಸಿದ್ದಾರೆ.

2010 ರ ಏಪ್ರಿಲ್ 6 ರಂದು 131 ಗ್ರಾಮ್ ಚಿನ್ನಾಭರಣಗಳನ್ನು ಅಡವಿಟ್ಟು 1.23 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಾದ ಬಳಿಕ ಒಟ್ಟಾರೆ 138 ಗ್ರಾಮ್ ಗಳ ಚಿನ್ನಾಭರಣಗಳನ್ನು ಅಡವಿಟ್ಟು ಒಟ್ಟು 1.65 ಲಕ್ಷ ಸಾಲ ಪಡೆದಿದ್ದರು, 2011 ರ ಮಾರ್ಚ್ 28 ರಂದು ಮೊದಲು ಪಡೆದಿದ್ದ 1.23 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಿ 131 ಗ್ರಾಮ್ ನಷ್ಟು ಚಿನ್ನಾಭರಣಗಳನ್ನು ವಾಪಸ್ ಪಡೆದಿದ್ದರು. ಇದಾದ ಬಳಿಕ ಕೆಲವೇ ಸಮಯದಲ್ಲಿ ಮತ್ತೊಂದು ಬಾರಿ ಪಡೆದಿದ್ದ ಸಾಲವನ್ನೂ ಮರುಪಾವತಿ ಮಾಡಿದ್ದರು, ಆದರೆ ಎರಡನೇ ಬಾರಿ ಸಾಲ ಮರುಪಾವತಿ ಮಾಡುವ ವೇಳೆ ಇನ್ನೂ 1 ರೂಪಾಯಿ ಬಾಕಿ ನೀಡಬೇಕೆಂದು ಕಾರಣ ಹೇಳಿರುವ ಬ್ಯಾಂಕ್ ನ ಅಧಿಕಾರಿಗಳು ಉಳಿದ ಚಿನ್ನಾಭರಣಗಳನ್ನು ವಾಪಸ್ ನೀಡಲು ನಿರಾಕರಿಸುತ್ತಿದ್ದಾರೆ ಎಂದು ಅರ್ಜಿದಾರ ಸಿ ಕುಮಾರ್ ಆರೋಪಿಸಿದ್ದಾರೆ. ಹಲವು ಬಾರಿ ಈ ಬಗ್ಗೆ ಬ್ಯಾಂಕ್ ಗೆ ಮನವಿ ಮಾಡಿದ್ದರೂ ಚಿನ್ನಾಭರಣಗಳನ್ನು ವಾಪಸ್ ನೀಡುತ್ತಿಲ್ಲ ಒಂದು ರೂಪಾಯಿಯನ್ನು ಸ್ವೀಕರಿಸಲೂ ಸಿದ್ಧವಿಲ್ಲ ಎಂದು ಅರ್ಜಿದಾರರು ಕೋರ್ಟ್ ಗೆ ಹೇಳಿದ್ದು, ತಮ್ಮ ಚಿನ್ನಾಭರಣಗಳ ಭದ್ರತೆಯ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Comments are closed.