ಹೈದರಾಬಾದ್: ತಮ್ಮ ಮಕ್ಕಳಿಗಾಗಿ ಪೋಷಕರು ಎಂತೆಂಥಾ ತ್ಯಾಗಗಳನ್ನು ಮಾಡುತ್ತಾರೆ. ಅವುಗಳಲ್ಲಿ ಇದು ಘಟನೆ ಸ್ವಲ್ಪ ವಿಶೇಷ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ 15 ವರ್ಷದ ಮಗನಿಗಾಗಿ ಅಂಕವಿಕಲ ತಂದೆಯೊಬ್ಬರು ಲಿವರ್ ದಾನ ಮಾಡಿ ನಿಸ್ವಾರ್ಥ ತ್ಯಾಗದ ಪ್ರತಿರೂಪವಾಗಿದ್ದಾರೆ.
ಹೈದರಾಬಾದ್ ನಲ್ಲಿ ಸರ್ಕಾರ ಲಿವರ್ ಕಸಿ ಯೋಜನೆಯನ್ನು ಕೈಗೊಂಡಿದ್ದು ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಮೃತರ ಲಿವರ್ ಕಸಿ ಮಾಡಲಾಗುತ್ತಿತ್ತು. ಈ ಯೋಜನೆ ಬಗ್ಗೆ ತಿಳಿದುಕೊಂಡ ಉಪ್ಪಾಳೈಯ ಎಂಬುವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನಮಗ 15 ವರ್ಷದ ಶಶಿಕಿರಣ್ ಗೆ ಲಿವರ್ ಕಸಿಗೆ ಮುಂದಾದರು.
ಇನ್ನು ಲಿವರ್ ಕಸಿ ಪಟ್ಟಿಯ ವೇಟಿಂಗ್ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿ ತನ್ನ ಮಗನ ಹೆಸರಿತ್ತು. ಹೀಗಾಗಿ ತನ್ನ ಮಗನನ್ನು ರಕ್ಷಿಸಿಕೊಳ್ಳುವ ಸಲುವಾಗಿ ತಂದೆಯೇ ಸ್ವಇಚ್ಛೆಯಿಂದ ಲಿವರ್ ದಾನ ಮಾಡಲು ಮುಂದಾದರು. ಆದರೆ ವೈದ್ಯರು ನಿಮ್ಮ ಲಿವರ್ ಮಗನಿಗೆ ಹೊಂದಬೇಕಾದರೆ ನೀವು 4 ಕೆಜಿಗಿಂತ ಹೆಚ್ಚು ತೂಕವನ್ನು ಇಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು. ಹೀಗಾಗಿ ಉಪ್ಪಾಳೈಯ 8 ಕೆಜಿ ತೂಕ ಕಡಿಮೆ ಮಾಡಿಕೊಂಡು ಮಗನಿಗೆ ಲಿವರ್ ದಾನ ಮಾಡಿದ್ದಾರೆ.
ಸದ್ಯ ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು ಏಳು ದಿನಗಳ ಬಳಿಕ ಉಪ್ಪಾಳೈಯರನ್ನು ಡಿಸ್ಚಾರ್ಚ್ ಮಾಡಲಾಗುವುದು. ಶಶಿಕಿರಣ್ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಲು ಮತ್ತಷ್ಟು ದಿನಗಳ ಕಾಲ ಆಸ್ಪತ್ರೆಯಲ್ಲೇ ಆರೈಕೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ಜೀವಂತ ವ್ಯಕ್ತಿಯ ಲಿವರ್ ಕಸಿ ಶಸ್ತ್ರ ಚಿಕಿತ್ಸೆ ಮಾಡಿರುವುದು ಇದೇ ಮೊದಲು ಎಂದು ವೈದ್ಯರು ತಿಳಿಸಿದ್ದಾರೆ.
Comments are closed.