ರಾಷ್ಟ್ರೀಯ

100 ಮಂದಿ ನಿರ್ಗತಿಕರಿಗೆ ಪ್ರತಿದಿನ ಹೊಟ್ಟೆತುಂಬ ಊಟ ಹಾಕುವ ಭಾರತಿ!

Pinterest LinkedIn Tumblr


ಚೆನ್ನೈ: ತಿರುಚಿರಾಪಳ್ಳಿಯ ಬೀಮಾ ನಗರ ನಿವಾಸಿ ಭಾರತಿ 100 ಮಂದಿ ನಿರ್ಗತಿಕರಿಗೆ ಪ್ರತಿದಿನ ಹೊಟ್ಟೆತುಂಬ ಊಟ ಹಾಕುವ ಪುಣ್ಯಕಾರ್ಯ ನಡೆಸುತ್ತಿದ್ದಾರೆ. ಅವರ ಮನೆಯ ಹೊರಗೆ ಹಿರಿಯ ನಾಗರಿಕರು, ದಿವ್ಯಾಂಗರು ಅನ್ನದಾಸೋಹಕ್ಕಾಗಿ ಸಾಲುಗಟ್ಟಿ ನಿಂತಿರುತ್ತಾರೆ. ಮಧ್ಯಾಹ್ನ 12 ಗಂಟೆಯಾಗುತ್ತಿದ್ದಂತೆ ಭಾರತಿ ಅವರು ತಮ್ಮ ದಿನಸಿ ಅಂಗಡಿಯಿಂದ ಮನೆಗೆ ವಾಪಸಾಗಿ ಮಧ್ಯಾಹ್ನದ ಅನ್ನದಾನಕ್ಕೆ ಸಿದ್ಧತೆ ನಡೆಸುತ್ತಾರೆ.

ಮಧ್ಯಾಹ್ನ 1 ಗಂಟೆಗೆ ಉತ್ತಮ ಗುಣಮಟ್ಟದ ಅಕ್ಕಿಯಿಂದ ತಯಾರಿಸಿದ ಬಿಸಿ ಬಿಸಿ ಅನ್ನ, ಒಂದು ಪೂರಿ, ರಸಂ, ಸಾಂಬಾರು ಮತ್ತು ಸ್ವೀಟ್‌ ಸಹಿತ ಭೋಜನವನ್ನು ಉಣಬಡಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಉಚಿತ ಬಟ್ಟೆಬರೆಗಳನ್ನೂ ದಾನ ಮಾಡುತ್ತಾರೆ. ಕಳೆದ 13 ವರ್ಷಗಳಿಂದ ಈ ಸೇವಾಕಾರ್ಯವನ್ನು ಅವರು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.

ಪ್ರತಿದಿನ ತಮ್ಮ ಮನೆಯಲ್ಲಿ 100 ಮಂದಿಗೆ ಅನ್ನದಾನ ಮಾಡುವ ತಿರುಚಿರಾಪಳ್ಳಿ ನಿವಾಸಿ ಭಾರತಿ

‘ಬಾಲ್ಯದಿಂದಲೂ ಅಗತ್ಯವುಳ್ಳರಿಗೆ ನೆರವಾಗಬೇಕೆಂಬ ತುಡಿತ ನನ್ನಲ್ಲಿತ್ತು. ನಾನು ಒಳಾಂಗಣ ವಿನ್ಯಾಸಕಾರನಾಗಿ (ಇಂಟೀರಿಯರ್ ಡಿಸೈನರ್) ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲೇ ನನ್ನ ತಂದೆ ಮತ್ತು ತಾಯಿ ನಿಧನರಾದರು. ಆ ದಿನಗಳಲ್ಲಿ ರಸ್ತೆಯಲ್ಲಿ ನಡೆದಾಡುವ ಹಿರಿಯ ನಾಗರಿಕರನ್ನು ಕಂಡರೆ ಮನಸ್ಸು ಕಸಿವಿಸಿಗೊಳ್ಳುತ್ತಿತ್ತು. ಬಳಿಕ ಬಡವರಿಗೆ, ನಿರ್ಗತಿಕರಿಗೆ ನೆರವಾಗಬೇಕೆಂದು ನಿರ್ಧರಿಸಿ, 2004ರಲ್ಲಿ ಈ ಅನ್ನದಾನದ ಕಾರ್ಯಕ್ರಮ ಆರಂಭಿಸಿದೆ’ ಎಂದು ಭಾರತಿ ನೆನಪಿಸಿಕೊಳ್ಳುತ್ತಾರೆ.

Comments are closed.