ಉದಯಪುರ: ಮಹಿಳೆ ಹಾಗೂ ಪ್ರೇಮಿ ಇಬ್ಬರನ್ನೂ ಬೆತ್ತಲೆಗೊಳಿಸಿ ಸಾರ್ವಜನಿಕವಾಗಿ ಮೆರವಣಿಗೆ ನಡೆಸಿರುವ ಆಘಾತಕಾರಿ ಘಟನೆ ರಾಜಸ್ಥಾನದ ಉದಯಪುರ ಬಳಿ ನಡೆದಿದೆ.
ಉದಯಪುರ ನಗರದಿಂದ ಕೇವಲ 25 ಕಿ.ಮೀ ದೂರದ ಸಾರೇಖುರ್ದ್ ಗ್ರಾಮದ ಕೈಲಾಶ್‌ಪುರಿ ಪ್ರದೇಶದಲ್ಲಿ 23 ವರ್ಷದ ಮಹಿಳೆ ಹಾಗೂ 22 ವರ್ಷದ ಪ್ರೇಮಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಇದನ್ನು ತಡೆಯುವ ಬದಲು ಜನತೆ ಇದನ್ನು ಸುಮ್ಮನೆ ನೋಡುತ್ತಾ ನಿಂತಿದ್ದು, ಮಹಿಳೆಯ ಮಾಜಿ ಪತಿ ಘಟನೆಯ ಫೋಟೋ ಹಾಗೂ ವೀಡಿಯೋವನ್ನು ಚಿತ್ರೀಕರಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಬಳಿಕ, ಸುಖೇರ್ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ನಗ್ನಗೊಳಿಸಿದ್ದ ಇಬ್ಬರನ್ನೂ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು, ಪೊಲೀಸರು ಈ ಪ್ರಕರಣವನ್ನು ಕೈಗೆತ್ತಿಕೊಂಡರು.
ವೀಡಿಯೋ: ಜೋಡಿಯ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಗ್ರಾಮಸ್ಥರು
ಮಹಿಳೆ ಐದು ವರ್ಷದ ಹಿಂದೆಯೇ ತರು ಗಮೆಟಿ ಎಂಬುವನ ಜತೆ ಮೊದಲ ಮದುವೆಯಾಗಿದ್ದಳು. ಬಳಿಕ ಬುಡಕಟ್ಟು ಸಂಪ್ರದಾಯದಂತೆ ಅವರಿಬ್ಬರೂ ಬೇರೆಯಾಗಿ, ಮಾಂಗಿಲಾಲ್ ಗಮೆಟಿ ಎಂಬುವನನ್ನು ಮದುವೆಯಾಗಿದ್ದಾಳೆ. ಅಲ್ಲದೆ, ಮೊದಲ ಮದುವೆಯ ಸಮಯದಲ್ಲೇ ರಾಮಲಾಲ್ ಗಮೆಟಿ ಎಂಬುವನನ್ನೂ ಪ್ರೀತಿಸುತ್ತಿದ್ದ ಆಕೆ ಅವನ ಜತೆಯಲ್ಲೂ ಸತತವಾಗಿ ಸಂಪರ್ಕದಲ್ಲಿದ್ದಳು. ಅಲ್ಲದೆ, ಗುಟ್ಟಾಗಿ ಮದುವೆಯಾಗಿ ಓಡಿ ಹೋಗಲು ಸಿದ್ಧವಾಗಿದ್ದರು ಎಂದು ಸಹ ಆರೋಪಿಸಲಾಗಿದೆ. ಅವರಿಬ್ಬರ ಪ್ರೀತಿಯ ಕುರಿತು ಮೊದಲ ಪತಿಗೆ ಗೊತ್ತಾಗಿದ್ದು, ಈ ಹಿನ್ನೆಲೆ ಗೆಳೆಯರ ಸಹಾಯ ಪಡೆದ ತರು, ಮಹಿಳೆ ಹಾಗೂ ಪ್ರೇಮಿಯನ್ನು ಬೆತ್ತಲೆಗೊಳಿಸಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ತನಿಖೆ ನಡೆಸುತ್ತಿರುವ ಸುಖೇರ್ ಪೊಲೀಸರು ಆರೋಪಿ ತರು ಗಮೆಟಿಯನ್ನು ಬಂಧಿಸಿದ್ದು, ಉಳಿದ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Comments are closed.