ರಾಂಚಿ: ದನಗಳ ವ್ಯಾಪಾರಿಯೊಬ್ಬರನ್ನು ಹೊಡೆದು ಸಾಯಿಸಿದ ಪ್ರಕರಣದ ಆರೋಪಿಗಳಿಗೆ ಹಾರ ಹಾಕಿ ಸನ್ಮಾನಿಸುವ ಮೂಲಕ ಕೇಂದ್ರ ವಿಮಾನಯಾನ ಖಾತೆ ರಾಜ್ಯ ಸಚಿವ ಜಯಂತ್ ಸಿನ್ಹಾ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಕಳೆದ ವರ್ಷದ ಜೂನ್‌ನಲ್ಲಿ ಜಾರ್ಖಂಡ್‌ನ ಹಜಾರಿಭಾಗ್ ಜಿಲ್ಲೆಯ ರಾಮ್‌ಘಡ್ ಪ್ರದೇಶದಲ್ಲಿ ದನಗಳ ವ್ಯಾಪಾರಿ ಅಲೀಮುದ್ದೀನ್ ಅನ್ಸಾರಿ ಅವರನ್ನು ಹೊಡೆದು ಸಾಯಿಸಲಾಗಿತ್ತು. ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ ಒಂದು ವರ್ಷದ ಬಳಿಕ ಜಾರ್ಖಂಡ್ ಹೈ ಕೋರ್ಟ್ 8 ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ರದ್ದುಗೊಳಿಸಿತ್ತು.
ಜೈಲಿನಿಂದ ಜಾಮೀನಿನ ಬಿಡುಗಡೆಯಾದ ಆರೋಪಿಗಳು ಸ್ಥಳಿಯ ಬಿಜೆಪಿ ನಾಯಕರೊಬ್ಬರ ಜೊತೆ ರಾಂಚಿಯ ಜಯಂತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ಕೊಟ್ಟಾಗ ಸಚಿವರು ಎಲ್ಲರನ್ನೂ ಹಾರ ಹಾಕಿ ಸ್ವಾಗತಿಸಿದ್ದರು. ಈ ಭಾವಚಿತ್ರ ವೈರಲ್ ಆಗುತ್ತಿದ್ದಂತೆ ಜಯಂತ್ ಸಿನ್ಹಾ ನಡೆಗೆ ಎಲ್ಲಡೆ ಆಕ್ರೋಶ ವ್ಯಕ್ತವಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಸಚಿವರು ಸರಣಿ ಟ್ವೀಟ್‌ಗಳ ಮೂಲಕ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
‘ಹಿಂಸಾಚಾರ ಯಾವುದೇ ರೂಪದಲ್ಲಿದ್ದರೂ ಅದನ್ನು ಖಂಡಿಸುತ್ತೇನೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಕಾನೂನು ಸರ್ವ ಶ್ರೇಷ್ಟವಾಗಿವೆ. ಯಾವುದೇ ವ್ಯಕ್ತಿಯ ಕಾನುನು ಬದ್ಧ ಹಕ್ಕುಗಳನ್ನು ಉಲ್ಲಂಘಿಸುವ ವರ್ತನೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಕೇಂದ್ರ ಸಚಿವ ಜಯಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.
‘ಭವಿಷ್ಯದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದ್ದು, ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ಕಾನೂನು ಕೈಗೆತ್ತಿಗೊಳ್ಳುವವರಿಗೆ ಶಿಕ್ಷೆಯಾಗಲಿದೆ’ ಎಂದು ಜಯಂತ್ ಸಿನ್ಹಾ ಮತ್ತೊಂದು ಟ್ವೀಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
Comments are closed.