ರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಹೆಚ್ಚಿದಂತೆ ಗುಂಪು ಹಿಂಸೆಯೂ ಹೆಚ್ಚುತ್ತದೆ: ಸಚಿವ

Pinterest LinkedIn Tumblr


ಜೈಪುರ : ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಹೆಚ್ಚಿದಂತೆಲ್ಲ ದೇಶದಲ್ಲಿ ಚಚ್ಚಿ ಸಾಯಿಸುವ ಗುಂಪು ಹಿಂಸೆಗಳ ಪ್ರಕರಣಗಳೂ ಹೆಚ್ಚಲಿವೆ ಎಂದು ಕೇಂದ್ರ ಜಲ ಸಂಪನ್ಮೂಲ ಸಹಾಯಕ ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಎಚ್ಚರಿಸಿದ್ದಾರೆ.

ರಾಜಸ್ಥಾನದ ಅಳವಾರ್‌ ಜಿಲ್ಲೆಯಲ್ಲಿ ನಿನ್ನೆ ಶುಕ್ರವಾರ 28ರ ಹರೆಯದ ಅಕ್‌ಬರ್‌ ಖಾನ್‌ ಎಂಬ ವ್ಯಕ್ತಿಯನ್ನು ಗೋ ಕಳ್ಳಸಾಗಣೆಗಾರನೆಂಬ ಶಂಕೆಯಲ್ಲಿ ಉದ್ರಿಕ್ತ ಸಮೂಹ ಚಚ್ಚಿ ಕೊಂದ ಘಟನೆಯ ಹಿನ್ನೆಲೆಯಲ್ಲಿ ಮಾತನಾಡುತ್ತಿದ್ದ ಅವರು ‘ಪ್ರಧಾನಿ ಮೋದಿ ಟೀಕಾಕಾರರು ಈ ಬಗೆಯ ಗುಂಪು ಹಿಂಸೆ ಪ್ರಕರಣಗಳನ್ನು ಬಳಸಿಕೊಂಡು ಮೋದಿ ಅವರ ವ್ಯಕ್ತಿತ್ವಕ್ಕೆ ಕುಂದುಂಟು ಮಾಡಲು ಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ಮೋದಿ ಜನಪ್ರಿಯತೆಯನ್ನು ತಗ್ಗಿಸಲು ಅಸಹಿಷ್ಣುತೆಯ ನೆಪದಲ್ಲಿ ಅವಾರ್ಡ್‌ ವಾಪಸಿ ನಡೆಯಿತು; ಅನಂತರ ಉ.ಪ್ರ. ಚುನಾವಣೆಯ ವೇಳೆ ಗುಂಪು ಹಿಂಸೆ ಪ್ರಕರಣಗಳು ನಡೆದವು; 2019ರ ಮಹಾ ಚುನಾವಣೆಯಲ್ಲಿ ಬೇರೆ ಇನ್ನೇನೋ ಆಗಲಿಕ್ಕಿದೆ’ ಎಂದು ಸಚಿವ ಮೇಘವಾಲ್‌ ಹೇಳಿದರು.

‘1984ರ ಸಿಕ್ಖ್ ವಿರೋಧಿ ಹಿಂಸೆಗಳು ಭಾರತದಲ್ಲಿ ನಡೆದಿರುವ ಅತ್ಯಂತ ದೊಡ್ಡ ಸಾಮೂಹಿಕ ಗುಂಪು ಹಿಂಸೆಯ ಮಾರಣ ಹೋಮವಾಗಿತ್ತು’ ಎಂದ ಸಚಿವ ವೇಘವಾಲ್‌, ಅಳವಾರ್‌ನಲ್ಲಿ ಅಕ್‌ಬರ್‌ ಖಾನ್‌ ಎಂಬವರನ್ನು ಉದ್ರಿಕ್ತ ಜನಸಮೂಹ ಚಚ್ಚಿ ಕೊಂದ ಘಟನೆಯನ್ನು ಬಲವಾಗಿ ಖಂಡಿಸಿ ಅಪರಾಧಿಗಳಿಗೆ ಕಠಿನ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಮೃತ ಅಕ್‌ಬರ್‌ ಖಾನ್‌ ಅವರ ತಂದೆ ಸುಲೇಮಾನ್‌ ಅವರು ತನ್ನ ಪುತ್ರನನ್ನು ಕೊಂದವರಿಗೆ ಅತ್ಯಂತ ಕಠಿನ ಶಿಕ್ಷೆಯಾದಾಗಲೇ ನಮಗೆ ನ್ಯಾಯ ದೊರಕಿದಂತಾಗುವುದು ಎಂದು ಹೇಳಿದ್ದಾರೆ.

Comments are closed.