ರಾಷ್ಟ್ರೀಯ

ಚಿಂದಿ ಆಯುವವನ ಪುತ್ರನಿಗೆ ಎಂಬಿಬಿಎಸ್ ಸೀಟ್‌!

Pinterest LinkedIn Tumblr


ಇಂದೋರ್: ಸಾಧನೆಗೆ ಬಡತನ ಅಡ್ಡಿ ಬರಲಾರದು ಎನ್ನುವುದಕ್ಕೆ ಹಲವು ನಿದರ್ಶನಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ. ಚಿಂದಿ ಆಯುವವನ ಪುತ್ರನೊಬ್ಬ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಪಡೆಯುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ಮಧ್ಯಪ್ರದೇಶದ ಇಂದೋರ್‌ದೇವಾಸ್ ಜಿಲ್ಲೆಯ ಕುಗ್ರಾಮ ವಿಜಯ್‌ಗಂಜ್ ಗ್ರಾಮದಲ್ಲಿ ಚಿಂದಿ ಆಯ್ದು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ರಂಜಿತ್ ಚೌಧರಿ ಅವರ ಪುತ್ರ ಆಶಾರಾಂ ಜೋಧ್‌ಪುರದ ಪ್ರತಿಷ್ಠಿತ ಏಮ್‌ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಸೀಟು ಪಡೆದಿದ್ದಾನೆ.

ನನ್ನ ತಂದೆ ಯಾವಾಗಲೂ ‘ಮಗನೇ ನೀನು ಎಂತಹ ಪರೀಕ್ಷೆಯಲ್ಲಾದರೂ ಪಾಸಾಗಬಲ್ಲೆ ಎಂದು ಸದಾ ತನ್ನ ಪುಟ್ಟ ಗುಡಿಸಲಿನಲ್ಲಿ ಕುಳಿತಿಕೊಂಡು ಮುಗ್ಧತೆಯಿಂದ ಈ ಮಾತನ್ನು ಹೇಳುತ್ತಿದ್ದರು. ‘ಬಾಬಾ, ಇದು ದೊಡ್ಡ ಶಾಲೆ. ನಾನೂ ಒಂದು ದಿನ ಡಾಕ್ಟರ್ ಆಗುವೆ. ನಮ್ಮೂರಿನ ಕಲ್ಲು ಹಾಗೆ ಎಂದು ಉತ್ತರಿಸುತ್ತಿದ್ದೆ ಎಂದು ಅಶಾರಾಂ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಾನೆ.

ಕಲ್ಲು ಡಾಕ್ಟರ್ ಇರುವುದು ಈ ಗ್ರಾಮದಿಂದ 10 ಕಿಮೀ ದೂರದ ಊರಿನಲ್ಲಿ. ಮಗ ಕಲ್ಲು ಡಾಕ್ಟರ್ ಹೆಸರು ಹೇಳುತ್ತಿದ್ದ ಹಾಗೆ ತಂದಯ ಕಣ್ಣಂಚಿನಲ್ಲಿ ಅದೇನೊ ಮಂದಹಾಸ. ಜತೆಗೆ ಕಣ್ಣೀರು. ಕೊನೆಗೂ ಮಗ ತನ್ನ ತಂದೆಯ ಆಸೆ ಪೂರೈಸುವ ಹಂತ ತಲುಪಿದ್ದಾನೆ. ನಾನು ಎಂತಹ ಸಾಧನೆ ಮಾಡಿದ್ದೇನೆ ಎನ್ನುವುದು ನನ್ನ ತಂದೆಗೆ ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗಲು ಸ್ವಲ್ಪ ಸಮಯ ಎಂದು ಆಶಾರಾಂ ಹೇಳುತ್ತಾನೆ.

ಪುಣೆಯ ದಕ್ಷಿಣ ಫೌಂಡೇಶನ್‌ನಲ್ಲಿ ಸ್ಕಾಲರ್‌ಶಿಪ್ ಪಡೆದ 75 ವಿದ್ಯಾರ್ಥಿಗಳಲ್ಲಿ ಅಶಾರಾಂ ಒಬ್ಬ. ವೈದ್ಯಕೀಯ ವಿಭಾಗದಲ್ಲಿ ದೇಶಕ್ಕೆ 707ನೇ ರ್ಯಾಂಕ್ ಮತ್ತು ಒಬಿಸಿ ಕೆಟಗರಿಯಲ್ಲಿ 141ನೇ ರ‍್ಯಾಂಕ್ ಪಡೆದಿದ್ದಾನೆ. ಹತ್ತನೇ ತರಗತಿ ಉತ್ತೀರ್ಣವಾದ ನಂತರ ಫೌಂಡೇಶನ್ ನೆರವಿನಿಂದ ಶಿಕ್ಷಣ ಮುಂದುವರಿಸಿದ್ದಾಗಿ ಹೇಳುತ್ತಾನೆ. ನನ್ನ ತಂದೆ ನನಗೋಸ್ಕರ ಅಗತ್ಯಕ್ಕಿಂತ ಹೆಚ್ಚು ಚಿಂದಿ ಆಯ್ದಿದ್ದಾರೆ. ನಾನು ಕೇಳಿದ್ದೆಲ್ಲವನ್ನೂ ಪೂರೈಸಿದ್ದಾರೆ. ನನ್ನ ತಂದೆ ತಾಯಿಗಳ ಪ್ರೋತ್ಸಾಹವಿಲ್ಲದಿದ್ದರೆ ಈ ಗುರಿ ತಲುಪಲು ಎಂದು ಸ್ಮರಿಸಿಕೊಳ್ಳುತ್ತಾನೆ.

ಆಶಾರಾಂನ ಹೋರಾಟ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ವೈದ್ಯಕೀಯ ಶಿಕ್ಷಣ ಮುಂದುವರಿಸಲು ಹಣದ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರಿಗೆ ಮನವಿ ಮಾಡಿಕೊಂಡಿದ್ದಾನೆ. ಪ್ರತಿ ವರ್ಷವೂ ಚಿನ್ನದ ಪದಕ ಪಡೆಯುತ್ತೇನೆ. ಶಿಕ್ಷಣ ಮುಗಿದ ನಂತರ ನನ್ನ ಹಳ್ಳಿಗೆ ಹಿಂತಿರುಗಿ ಇಲ್ಲಿಯೇ ವೃತ್ತಿ ಮುಂದುವರಿಸುತ್ತೇನೆ. ಇಲ್ಲಿ ಯಾರೊಬ್ಬರೂ ವೈದ್ಯರಿಲ್ಲ. ನನ್ನ ಹಳ್ಳಿಯ ಜನರಿಗೆ ವೈದ್ಯಕೀಯ ನೆರವು ನೀಡುವ ಆಸೆ ಇದೆ ಎಂದು ತನ್ನ ಅನಿಸಿಕೆಗಳನ್ನು ಹಂಚಿಕೊಂಡಿದ್ದಾನೆ.

Comments are closed.