ರಾಷ್ಟ್ರೀಯ

40 ಹುಡುಗಿಯರ ಮೇಲೆ ನಿರಂತರ ಅತ್ಯಾಚಾರ ಆರೋಪ: ಗೌರ್ನಮೆಂಟ್​ ಶೆಲ್ಟರ್​ ಹೌಸ್​ನಲ್ಲಿ ಅತ್ಯಾಚಾರ ಸಂತ್ರಸ್ತೆ ಕಳೇಬರಕ್ಕೆ ಶೋಧನೆ

Pinterest LinkedIn Tumblr


ಮುಜಾಫರ್​ಪುರ(ಬಿಹಾರ): ನಲವತ್ತಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರ ನಡೆದಿದೆ ಎನ್ನಲಾದ ಆರೋಪ ಹೊತ್ತಿರುವ ಬಿಹಾರದ ಗೌರ್ನಮೆಂಟ್​ ಶೆಲ್ಟರ್​ ಹೌಸ್ ಆವರಣದಲ್ಲಿ ಸಂತ್ರಸ್ತೆಯೊಬ್ಬರ ಮೃತದೇಹ ಪತ್ತೆಗಾಗಿ ಪೊಲೀಸರು ಸೋಮವಾರ ಭೂಮಿ ಅಗೆದು ಶೋಧ ಕಾರ್ಯ ಆರಂಭಿಸಿದ್ದಾರೆ.

ಓರ್ವ ಹುಡುಗಿಯನ್ನು ಹಲ್ಲೆ ಮಾಡಿ ಕೊಲೆಗೈದು ಶೆಲ್ಟರ್​ ಹೌಸ್ ಮುಂಭಾಗದಲ್ಲಿ ಹೂತು ಹಾಕಿದ್ದಾರೆ ಎಂಬ ಆರೋಪದ ಮೇರೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತ್ಯಾಚಾರ ಸಂಬಂಧ ಸಲ್ಲಿಸಿದ್ದ ವೈದ್ಯಕೀಯ ವರದಿಯಲ್ಲಿ 21 ರಲ್ಲಿ 16 ಹುಡುಗಿಯರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎಂದು ದೃಢೀಕರಿಸಿದ್ದಾರೆ. ಮುಜಾಫರ್​ಪುರದ ಸರ್ಕಾರಿ ಮನೆಯಲ್ಲಿರುವ ಇನ್ನುಳಿದ ಹುಡುಗಿಯರ ವೈದ್ಯಕೀಯ ವರದಿ ಬರಬೇಕಿದೆ.

ಶೆಲ್ಟರ್​ ಹೌಸ್ನ ಸಿಬ್ಬಂದಿಯೊಂದಿಗೆ ಸಹಕರಿಸಲು ಹುಡುಗಿ ಒಪ್ಪದಿದ್ದಕ್ಕೆ ಆಕೆಯನ್ನು ಹತ್ಯೆಗೈಯಲಾಗಿದೆ ಎಂದು ಸ್ಥಳೀಯ ಹುಡುಗಿಯೊಬ್ಬಳು ಪೊಲೀಸರಿಗೆ ತಿಳಿಸಿದ್ದಾಳೆ. ಈ ಪ್ರಕರಣ ಸಂಬಂಧ ಇಲ್ಲಿನ ಜಿಲ್ಲಾಡಳಿತದ ಅಧಿಕಾರಿಯೊಬ್ಬರನ್ನು ಪೊಲೀಸರು ಬಂಧಿಸಿದ್ದು, ಸದ್ಯ ಶೆಲ್ಟರ್​ ಹೌಸ್​ಗೆ ಬೀಗ ಜಡಿಯಲಾಗಿದೆ.

ಸರ್ಕಾರದ ವಿರುದ್ಧ ಯಾದವ್ ಕಿಡಿ
ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಟ್ವೀಟ್​ ಮಾಡಿ ಅಪರಾಧವನ್ನು ತಡೆಯುವಲ್ಲಿ ರಾಜ್ಯಾಡಳಿತ ವಿಫಲವಾಗಿದೆ ಎಂದು ಪ್ರಕರಣವನ್ನು ಎತ್ತಿಹಿಡಿಯುವ ಮೂಲಕ ಬಿಹಾರದ ಮುಖ್ಯಮಂತ್ರಿ ನಿತೀಶ್​​ ಕುಮಾರ್ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದಾರೆ.​

ಕಳೆದ ಮಾರ್ಚಿನಿಂದ ಶೆಲ್ಟರ್​ ಹೌಸ್​ನಲ್ಲಿರುವ ಅಪ್ರಾಪ್ತರ ಮೇಲೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರಂತರ ಲೈಂಗಿಕ ದೌರ್ಜನ್ಯ ಎಸಗುತ್ತಿರುವುದು ಸರ್ಕಾರಕ್ಕೆ ತಿಳಿದಿದೆ. ಅತ್ಯಾಚಾರಕ್ಕೆ ಒಳಗಾದವರಲ್ಲಿ ಕೆಲವರು ಗರ್ಭಪಾತಕ್ಕೂ ಒಳಗಾಗಿದ್ದಾರೆ. ಆದರೂ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತೇಜಸ್ವಿ ಯಾದವ್​ ತರಾಟೆಗೆ ತೆಗೆದುಕೊಂಡಿದ್ದಾರೆ.

ಪ್ರಕರಣ ಸಂಬಂಧ ಸಂತ್ರಸ್ತರನ್ನು ಆರೋಪಿಗಳು ಮೃಗೀಯವಾಗಿ ನಡೆಸಿಕೊಂಡಿದ್ದನ್ನು ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯ ಬಳಿ ಹೇಳಿಕೊಂಡಿದ್ದು, ಇದರ ಆಧಾರದ ಮೇಲೆ ಬಿಹಾರದ ಸಮಾಜ ಕಲ್ಯಾಣ ಇಲಾಖೆ ದೂರು ದಾಖಲಿಸಿತ್ತು. ಈ ಸಂಬಂಧ ಇದುವರೆಗೂ ಸುಮಾರು 10 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Comments are closed.