ರಾಷ್ಟ್ರೀಯ

ಇಂದು ಕಾರ್ಗಿಲ್ ವಿಜಯ ದಿವಸಕ್ಕೆ 19 ವರ್ಷ: ದೇಶದಾದ್ಯಂತ ಹುತಾತ್ಮ ಯೋಧರ ಸ್ಮರಣೆ

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ಪಾಲಾಗಿದ್ದ ಭಾರತ-ಪಾಕ್ ಗಡಿಯಲ್ಲಿರುವ ಕಾರ್ಗಿಲ್ ಔಟ್ ಪೋಸ್ಟ್ ನ್ನು ಯುದ್ಧದಲ್ಲಿ ಗೆದ್ದು ಭಾರತ ವಾಪಸ್ ಪಡೆದ ದಿನ ಜುಲೈ 26, ಅದನ್ನು ಭಾರತ ಪ್ರತಿವರ್ಷ ಕಾರ್ಗಿಲ್ ವಿಜಯ್ ದಿವಸ ಎಂದು ಆಚರಿಸಿಕೊಂಡು ಬರುತ್ತಿದೆ.

1999ರಲ್ಲಿ ಸುಮಾರು 60ಕ್ಕೂ ಹೆಚ್ಚು ದಿನಗಳು ನಡೆದ ಯುದ್ಧದಲ್ಲಿ ಕೊನೆಗೂ ಜುಲೈ 26ರಂದು ವಿಜಯ ಸಿಕ್ಕಿತು. ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಗಳ ಸುಮಾರು 3,500ಕ್ಕೂ ಹೆಚ್ಚು ಸೈನಿಕರು ಪ್ರಾಣತೆತ್ತಿದ್ದರು. ಕಾರ್ಗಿಲ್ ನಲ್ಲಿ ಹುತಾತ್ಮರಾದ ಸೈನಿಕರ ಗೌರವಾರ್ಥ ಇಂದು ಕಾರ್ಗಿಲ್ ದಿನವನ್ನು ಆಚರಿಸಲಾಗುತ್ತದೆ.

ಕಾರ್ಗಿಲ್ ವಿಜಯ ದಿವಸವನ್ನು ಜಮ್ಮು-ಕಾಶ್ಮೀರದ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಚರಿಸಲಾಗುತ್ತದೆ. ದೆಹಲಿಯ ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ, ರಾಷ್ಟ್ರಪತಿ ಮೊದಲಾದವರು ಗೌರವ ನಮನ ಸಲ್ಲಿಸುತ್ತಾರೆ.

ಇಂದು ಬೆಳಗ್ಗೆಯಿಂದಲೇ ಜಮ್ಮು-ಕಾಶ್ಮೀರದ ಡ್ರಾಸ್ ಯುದ್ಧ ಸ್ಮಾರಕದಲ್ಲಿ 19ನೇ ಕಾರ್ಗಿಲ್ ವಿಜಯ ದಿವಸ ಆಚರಣೆ ಆರಂಭಗೊಂಡಿದೆ.

ಕಾರ್ಗಿಲ್ ವಿಜಯ ದಿವಸದ ದಿನವಾದ ಇಂದು ಪ್ರತಿಯೊಬ್ಬ ಭಾರತೀಯರು ಸೇನಾ ಪಡೆಯ ಧೈರ್ಯ ಮತ್ತು ಸಾಹಸಗಳನ್ನು ಸ್ಮರಿಸುತ್ತಾರೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮ್ಮ ನಮನಗಳು ಮತ್ತು ಅವರ ಕುಟುಂಬದವರಿಗೆ ಋಣ ನಮ್ಮೆಲ್ಲರ ಮೇಲಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.

Comments are closed.