ರಾಷ್ಟ್ರೀಯ

ಕೇರಳ ಪೊಲೀಸರಿಂದ ಫೇಸ್‍ಬುಕ್ ಲೈಕ್ಸ್‌ನಲ್ಲಿ ಬೆಂಗಳೂರು ಹಿಂದಿಕ್ಕಲು ಪಣ

Pinterest LinkedIn Tumblr


ತಿರುವನಂತಪುರಂ: ತಮ್ಮ ಫೇಸ್‍ಬುಕ್ ಪೇಜ್ ಲೈಕ್ಸ್ ಹೆಚ್ಚಿಸಿಕೊಳ್ಳಲು ಕೇರಳ ಪೊಲೀಸರು ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್‍ಬುಕ್ ಲೈಕ್ಸ್ ದಾಖಲೆ ಮುರಿಯಲು ಪಣತೊಟ್ಟಿರುವ ಅವರು, ತಮ್ಮ ಪುಟವನ್ನು ಹೆಚ್ಚಿನ ಸಂಖ್ಯೆಯಲ್ಲಿ ಲೈಕ್ ಮಾಡಿ ಎಂದು ಕೇರಳದ ಜನರಲ್ಲಿ ವಿನಂತಿಸಿಕೊಂಡಿದ್ದಾರೆ. ಈ ಮೂಲಕ ದೇಶದಲ್ಲೇ ನಂಬರ್ ಒನ್ ಸ್ಥಾನದಲ್ಲಿರುವ ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್‍ಬುಕ್ ಪೇಜನ್ನು ಹಿಂದಿಕ್ಕುವ ಕನಸನ್ನು ಕೇರಳ ಪೊಲೀಸರು ಕಂಡಿದ್ದಾರೆ.

ಇದಕ್ಕಾಗಿ ತಮಾಷೆಯ, ಜನರ ಗಮನಸೆಳೆಯುವ ಪೋಸ್ಟ್‌ಗಳನ್ನು ಮಾಡುತ್ತಾ ಲೈಕ್ಸ್ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಈ ಹಿಂದೆ ಶಾಲಾ ಪಠ್ಯಪುಸ್ತಕದ ತರಹ ಪೋಸ್ಟ್ ಮಾಡಲಾಗುತ್ತಿತ್ತು. ಈಗ ಇದಕ್ಕಾಗಿಯೇ ಆರು ಮಂದಿ ಪೊಲೀಸರಿಗೆ ಫೇಸ್‍ಬುಕ್ ನಿಯಂತ್ರಿಸುವ ಜವಾಬ್ದಾರಿಯನ್ನು ನೀಡಿದ್ದು, ಸಾರ್ವಜನಿಕರ ಜತೆ ಹೆಚ್ಚುಹೆಚ್ಚು ಬೆರೆಯುವಂತಹ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ.

ಸಂತೋಷ್ ತುಳಸಿಧರ ಕುರುಪ್ ಎಂಬುವವರು ಕೇರಳ ಪೊಲೀಸರ ಮನವಿಗೆ ಈ ರೀತಿ ಸ್ಪಂದಿಸಿದ್ದಾರೆ, “ಆಣೆ ಮಾಡಿ ಹೇಳಿ ಒಂದು ವೇಳೆ ಮುಂದೆ ನಾವೇನಾದರೂ ತಪ್ಪು ಮಾಡಿದರೆ ನಮ್ಮನ್ನು ಹಿಡಿಯಲ್ಲ ಅಂತ ಆಗ ನಿಮ್ಮ ಪೋಸ್ಟ್‌ಗಳನ್ನು ಹಂಚಿಕೊಂಡು ಹೆಚ್ಚಿನ ಜನಕ್ಕೆ ತಲುಪಿಸುತ್ತೇವೆ” ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕೇರಳ ಪೊಲೀಸರು ಅಷ್ಟೇ ತಮಾಷೆಯಾಗಿ, “ಇಲ್ಲ, ಖಂಡಿತ ಆ ರೀತಿ ಮಾಡಲು ಸಾಧ್ಯವಿಲ್ಲ” ಎಂದಿದ್ದಾರೆ. ಇದೀಗ ಕೇರಳ ಪೊಲೀಸರ ಪ್ರಯತ್ನ ತಕ್ಕಮಟ್ಟಿಗೆ ಫಲಿಸುತ್ತಿದೆ. ಅವರ ಫೇಸ್‍ಬುಕ್ ಪುಟದಲ್ಲಿ ಈ ರೀತಿಯ ಕಾಮೆಂಟ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಹರಿದಾಡುತ್ತಿವೆ. ಲೈಕ್ಸ್ ಸಹ ಹೆಚ್ಚಾಗುತ್ತಿವೆ.

ಇದೆಲ್ಲದರ ಫಲವಾಗಿ ಕಳೆದ ಕೆಲ ವಾರಗಳಿಂದ ಅವರ ಫೇಸ್‍ಬುಕ್ ಪೇಜ್ ರೀಚ್ ಸಹ ಹೆಚ್ಚಳವಾಗಿದೆ. ಇದುವರೆಗೆ 480K ಲೈಕ್ಸ್ ಸಿಕ್ಕಿವೆ. ಆದರೂ ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್‍ಬುಕ್ ಪುಟವನ್ನು ಹಿಂದಿಕ್ಕಲು ಆಗಿಲ್ಲ. ಬೆಂಗಳೂರು ಟ್ರಾಫಿಕ್ ಪೊಲೀಸರ ಫೇಸ್‍ಬುಕ್ ಪುಟಕ್ಕೆ 500k ಲೈಕ್ಸ್ ಇದ್ದು, ಶೀಘ್ರದಲ್ಲೇ ಆ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ ಕೇರಳ ಪೊಲೀಸರು.

Comments are closed.