ರಾಷ್ಟ್ರೀಯ

‘ತ್ರಿ ಈಡಿಯಟ್ಸ್​’ ರೀತಿ ಯ್ಯೂಟ್ಯೂಬ್​ ನೊಡುತ್ತಾ ಮನೆಯಲ್ಲೇ ಹೆರಿಗೆ ಮಾಡಿ ಗರ್ಭಿಣಿಯ ಕೊಂದರು!

Pinterest LinkedIn Tumblr


ಕೋಯಂಬತ್ತೂರು: ಸಹಜ ಹೆರಿಗೆ ಮಾಡಿಕೊಳ್ಳುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳಿಂದ ಪ್ರೇರಿತರಾದ ತಮಿಳುನಾಡಿನ ದಂಪತಿ ಮನೆಯಲ್ಲಿಯೇ ಹೆರಿಗೆ ಮಾಡಿಕೊಳ್ಳಲು ಹೋಗಿ ಮಹಾ ಪ್ರಮಾದವನ್ನೇ ಮಾಡಿಕೊಂಡಿದ್ದಾರೆ. ಘಟನೆಯಲ್ಲಿ ಮಹಿಳೆಯು ಮಗುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾಳೆ.
ಕೃತಿಕಾ(28) ಮತ್ತು ಆಕೆಯ ಪತಿ ತಮ್ಮ ಎರಡನೇ ಮಗುವಿನ ಹೆರಿಗೆ ವೇಳೆ ಇಂಥ ಅಪಾಯಕಾರಿ ಕೆಲಸಕ್ಕೆ ಕೈ ಹಾಕಿದ್ದು, ಘಟನೆಯಲ್ಲಿ ಕೃತಿಕಾ ಪ್ರಾಣವನ್ನೇ ತ್ಯಾಗ ಮಾಡಿದ್ದಾಳೆ. ಮಗುವಿಗೆ ಜನ್ಮ ನೀಡಿದ ನಂತರ ತೀವ್ರ ರಕ್ತಸ್ರಾವವಾಗಿ ಆಕೆ ಕೊನೆಯುಸಿರೆಳೆದಿದ್ದಾಳೆ.
ಈ ಹೆರಿಗೆ ಕಾರ್ಯದಲ್ಲಿ ಕೃತಿಕಾಳ ಪತಿಯ ಸ್ನೇಹಿತ ಮತ್ತು ಆತನ ಪತ್ನಿಯೂ ಸೇರಿಕೊಂಡಿದ್ದರು. ವೈದ್ಯಕೀಯ ಕ್ರಮಗಳ ಬಗ್ಗೆ ಈ ಮೂವರಿಗೆ ಕಿಂಚಿತ್ತು ಅರಿವಿಲ್ಲದಿದ್ದರೂ, ಎಲ್ಲರೂ ಒಟ್ಟುಗೂಡಿ ಮಹಿಳೆಗೆ ಮನೆಯಲ್ಲಿಯೇ ಹೆರಿಗೆ ಮಾಡಿಸಿದ್ದಾರೆ. ಆದರೆ, ಮಹಿಳೆಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ನಂತರ ಪ್ರಜ್ಞೆ ಕಳೆದುಕೊಂಡ ಮಹಿಳೆಯನ್ನು ನೆರೆಮನೆಯವರೆಲ್ಲ ಸೇರಿ ಆಸ್ಪತ್ರೆಗೆ ಸಾಗಿಸಿದರಾದರೂ, ಅಷ್ಟರಲ್ಲಾಗಲೇ ಆಕೆ ಪ್ರಾಣ ಬಿಟ್ಟಿದ್ದಳು. ಮಗುವನ್ನು ಸದ್ಯ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯರು ಮಹಿಳೆಯ ಪತಿ, ಆತನ ಸ್ನೇಹಿತ ಮತ್ತು ಪತ್ನಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದೂ ಮೂವರನ್ನೂ ಬಂಧಿಸಲಾಗಿದೆ.

ಆಗಿದ್ದೇನು?
ಕಾರ್ತಿಕೇಯನ್​ ಎಂಬ ಖಾಸಗಿ ಸಂಸ್ಥೆಯ ನೌಕರ ಕೃತಿಕಾ ಎಂಬುವವರನ್ನು ವಿವಾಹವಾಗಿದ್ದು, ಈಗಾಗಲೇ ಅವರಿಗೆ ಐದು ವರ್ಷದ ಮಗುವಿದೆ. ಪತ್ನಿ ಎರಡನೇ ಮಗುವಿಗೆ ಗರ್ಭಧಾರಣೆ ಮಾಡಿದ ನಂತರ ದಂಪತಿ ಸಾಮಾಜಿಕ ಜಾಲತಾಣಗಳಾದ ಫೇಸ್​ಬುಕ್​ ಮತ್ತು ಯೂಟ್ಯೂಬ್​ಗಳಲ್ಲಿ ಬರುತ್ತಿದ್ದ ಪ್ರಸವದ ವಿಡಿಯೋಗಳನ್ನು, ಅದರಲ್ಲಿ ಪಾಲಿಸಲಾಗುವ ವಿಧಾನಗಳನ್ನು ಅನುಸರಿಸುತ್ತಿದ್ದರು ಎನ್ನಲಾಗಿದೆ. ಇದೇ 22ರಂದು ಕೃತಿಕಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಪತಿ ಕಾರ್ತಿಕೇಯನ್​ ತನ್ನ ಸ್ನೇಹಿತ ಪ್ರವೀಣ್​ ಮತ್ತು ಆತನ ಪತ್ನಿಯನ್ನು ನೆರವಿಗೆ ಕರೆದಿದ್ದಾನೆ. ಮನೆಯಲ್ಲಿಯೇ ಸಹಜ ಹೆರಿಗೆ ಮಾಡಿಸಲು ಪ್ರಯತ್ನಿಸುತ್ತಿರುವ ತನಗೆ ನೆರವಾಗುವಂತೆ ಕಾರ್ತಿಕೇಯನ್​ ಮನವಿ ಮಾಡಿದ್ದಾನೆ. ಆಗಲೂ ಯ್ಯೂಟೂಬ್​, ಫೇಸ್​ಬುಕ್​, ಇಂಟರ್ನೆಟ್​ನಲ್ಲಿನ ಸೂಚನೆಗಳನ್ನೇ ಪಾಲಿಸಿದ ಈ ಮೂವರು ತ್ರಾಸ ಪಟ್ಟು ಮಗುವನ್ನು ಹೊರ ತೆಗೆದಿದ್ದಾರೆ. ಮಹಿಳೆಯೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ, ಕೊನೆಗೆ ತೀವ್ರ ರಕ್ತ ಸ್ರಾವದೊಂದಿಗೆ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಅಂತಿಮವಾಗಿ ಪ್ರಾಣ ಬಿಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.