ಜಾರ್ಖಂಡ್: ನಾವು ಹೋಟೆಲ್ಗಳಲ್ಲಿ ಊಟ ಮಾಡಿದ ನಂತರ ಕೈ ತೊಳೆಯಲು ಫಿಂಗರ್ ಬೌಲ್ ನೀಡುತ್ತಾರೆ. ಫಿಂಗರ್ ಬೌಲಿನಲ್ಲಿ ನಿಂಬೆ ಹಣ್ಣಿನ ಕಡಿಯನ್ನು ಹಾಕಿರುತ್ತಾರೆ. ಊಟವಾದ ನಂತರ ಕೈ ಶುದ್ಧಗೊಳಿಸಲು ನಿಂಬೆ ಹಣ್ಣು ಬಳಸುವ ಜನ ಒಂದೆಡೆಗಾದರೆ, ಅಪರೂಪಕ್ಕೆ ಒಂದು ನಿಂಬೆ ಹಣ್ಣು ಸಿಕ್ಕರೆ ಇಡೀ ಕುಟುಂಬಕ್ಕೆ ಅದೇ ರಾತ್ರಿಯ ಊಟ. ಇದು ಆಫ್ರಿಕಾ ಖಂಡದ ದೇಶದ ಕಥೆಯಲ್ಲ, ನಮ್ಮ ದೇಶದ ಜಾರ್ಖಂಡ್ನ ಶೋಚನೀಯ ಸ್ಥಿತಿ. ಸರ್ಕಾರ ಒಪ್ಪಲಿ, ಬಿಡಲಿ, ಅಮಾಯಕರು ತುತ್ತು ಕೂಳಿಲ್ಲದೇ ನಿತ್ಯ ಇಲ್ಲಿ ಸಾಯುತ್ತಿದ್ದಾರೆ. ಜಾರ್ಖಂಡ್ ಹಸಿವಿನ ಮನಕಲಕುವ ಕಥೆಗಳ ಸರಣಿ ಲೇಖನಗಳನ್ನು ಮಾಧ್ಯಮವೊಂದು ನೀಡಲಿದೆ. ಆ ಮೂಲಕ ಹಸಿವಿನಿಂದ ಸಾಯುತ್ತಿರುವ ಬಡ ಸಹೋದರ ಸಹೋದರಿಯರ ಆರ್ಥಿಕ ಸ್ಥಿತಿಗತಿಗಳನ್ನು ನಿಮ್ಮ ಮುಂದಿಡುವ ಪ್ರಯತ್ನ ಮಾಡಲಿದೆ.
“ಒಂದು ನಿಂಬೆ ಹಣ್ಣು ಸಿಕ್ಕಿದರೆ ಅದನ್ನೇ ರಾತ್ರಿ ಊಟವನ್ನಾಗಿ ಸೇವಿಸುತ್ತೇವೆ. ನೀರು, ಉಪ್ಪು ಮತ್ತು ನಿಂಬೆ ಹಣ್ಣು. ಅದೂ ಕೂಡ ಎಲ್ಲೋ ಅಪರೂಪಕ್ಕೊಮ್ಮೆ ಸಿಗಬಹುದು,” ಈ ಮಾತನ್ನು ಸಿತಲಾ ಎಂಬ ಜಾರ್ಖಂಡ್ನ ಗಿರಿಡಿ ಜಿಲ್ಲೆಯ ಸೆವಟಾಂಡ್ ಎಂಬ ಹಳ್ಳಿಯ ಮಹಿಳೆ ಮಾಧ್ಯಮದ ಜತೆ ಮಾತನಾಡುವಾಗ ಹೇಳಿದರು.
ಇದು ಜಾರ್ಖಂಡ್ನ ನೈಜ ಚಿತ್ರಣ. ಮುಂದೊಂದು ದಿನ ಜಾರ್ಖಂಡ್ನಲ್ಲಿ ಹಸಿವಿನಿಂದ ಸಾವನ್ನಪ್ಪಿದ ಮಂದಿಯ ಪಟ್ಟಿಗೆ ಸಿತಲಾ ಮತ್ತಾಕೆಯ ಕುಟುಂಬವೂ ಸೇರಬಹುದು. ಆಗ ಸರ್ಕಾರ ಅದನ್ನು ಹಸಿವಿನಿಂದ ಸಾವು ಎಂದು ಒಪ್ಪಿಕೊಳ್ಳುವ ಬದಲು, ಹೊಟ್ಟೆ ನೋವು ಅಂತಲೋ ಅಥವಾ ಅಪೌಷ್ಠಿಕತೆಯಂತಲೋ ವರದಿ ಸಿದ್ಧಪಡಿಸಿ ಗುಂಡಿ ತೋಡಿ ಮುಚ್ಚಬಹುದು. ಯಾಕೆಂದರೆ ಜಾರ್ಖಂಡ್ ಸರ್ಕಾರದ ಪ್ರಕಾರ, ರಾಜ್ಯದಲ್ಲಿ ಈವರೆಗೂ ಒಂದೇ ಒಂದು ವ್ಯಕ್ತಿ ಕೂಡ ಹಸಿವಿನಿಂದ ಸಾವನ್ನಪ್ಪಿಲ್ಲ. ಸರ್ಕಾರಿ ಕಡತಗಳು ಒಂದು ಮಾತನಾಡಿದರೆ, ನೈಜ ಚಿತ್ರಣ ಹಸಿವಿನ ಕರಾಳ ರೂಪವನ್ನು ಬಿಚ್ಚಿಡುತ್ತದೆ.
ಇದೇ ವರ್ಷದ ಜನವರಿಯಲ್ಲಿ ಸಾವನ್ನಪ್ಪಿದ ಬುದ್ನಿ ಸೊರೇನ್ ಎಂಬ ಮಹಿಳೆಗೂ ಇದೇ ಆಗಿದ್ದು. ಹಸಿವಿನಿಂದ ಕಂಗಾಲಾಗಿ ಸಾವನ್ನಪ್ಪಿದ್ದರೆ ಮರಣೋತ್ತರ ಪರೀಕ್ಷೆಯಲ್ಲಿ ಬೇರೆಯದೇ ವರದಿಯಿದೆ. ಬುದ್ನಿ, ಬುಡಕಟ್ಟು ಜನಾಂಗದ ಮಹಿಳೆಯಾಗಿದ್ದಳು. ತನ್ನ ಕಡೆಯ ದಿನಗಳನ್ನು ಆಕೆ ಕಳೆದಿದ್ದು ಮರಗಿಡಗಳ ಎಲೆಯನ್ನು ತಿಂದು ಎಂದರೆ ಹಸಿವಿನ ಕ್ರೌರ್ಯ ನಿಮ್ಮ ಅರಿವಿಗೆ ಬರಬಹುದು.
ಅಲ್ಲಿನ ಆಡಳಿತ ಆಕೆಯ 7 ವರ್ಷದ ಮಗನಿಗೆ ಶಾಲೆಯಲ್ಲಿ ನೀಡುತ್ತಿದ್ದ ಮಧ್ಯಾಹ್ನದ ಊಟದಲ್ಲೂ ಪಾಲು ತೆಗೆದುಕೊಳ್ಳಲು ಬಿಡಲಿಲ್ಲ. ಕಡೆಗೆ ಪ್ರಾಣಿಗಳಂತೆ ಗಿಡ ಮರಗಳ ಎಲೆ ತಿಂದು ದಿನಗಳನ್ನು ದೂಡಿದಳು. ಬದುಕು ಅಸಾಧ್ಯ, ಆತ್ಮಹತ್ಯೆ ಮಾಡಿಕೊಳ್ಳುವ ತ್ರಾಣವೂ ಉಳಿದಿರಲಿಲ್ಲ. ಕಡೆಗೊಂದು ದಿನ ಆಕೆಯ ಹಸಿವೇ ಆಕೆಗೆ ಮುಕ್ತಿ ನೀಡಿತು.
ಆದರೆ ಗಿರಿಡ್ ಜಿಲ್ಲೆಯ ಡೆಪ್ಯುಟಿ ಕಮೀಷನರ್ ಮನೋಜ್ ಇದನ್ನು ಒಪ್ಪುವುದಿಲ್ಲ. ಹಸಿವಿನಿಂದ ಸಾಯುವುದಾದರೆ ಇಡೀ ಕುಟುಂಬವೇ ಸಾಯುತ್ತದೆ, ಕೇವಲ ಒಬ್ಬರು ಸಾಯುವುದಿಲ್ಲ ಎಂಬ ಹೊಸ ವಾದ ಹೂಡುತ್ತಾರೆ.
ಮೃತಪಟ್ಟ ಬುದ್ನಿಯ ಜತೆ ಸಿತಲಾಗೆ ಹತ್ತಿರದ ಸ್ನೇಹವಿತ್ತು. ಸಿತಲಾ ಸ್ಥಿತಿ ಕೂಡ ಬುದ್ನಿ ಸ್ಥಿತಿಗಿಂತ ಉತ್ತಮವಾಗಿಯೇನು ಇಲ್ಲ. ಅದಕ್ಕಾಗಿಯೇ ಸಿತಲಾ ಕಡೆಯ ಆಸೆಯೆಂದರೆ ತಾನು ಸಾಯುವಾಗ ಅವರ ಮಕ್ಕಳು ಹತ್ತಿರ ಇರಬಾರದು. ತನ್ನ ಸಾವನ್ನು ಅವರು ನೋಡಬಾರದು ಎಂದು ಬಿಕ್ಕುತ್ತಾರೆ ಸಿತಲಾ. “ಸಿತಲಾ ಸತ್ತಾಗ ಆಕೆಯ ಮೃತದೇಹ ಹಸಿವಿನ ರೌದ್ರಾವತಾರವನ್ನು ಸಾರುತ್ತಿತ್ತು. ಆಕೆಗೆ ಬೇಕಾಗಿದ್ದು ಕೆಲ ತುತ್ತು ಊಟ. ನನ್ನ ಸ್ಥಿತಿಯೂ ಇದಕ್ಕಿಂದ ಭಿನ್ನವಾಗಿಲ್ಲ,” ಮಣ್ಣಿನ ಮಡಕೆಗಳನ್ನು ತಡಕಿ ಏನಾದರೂ ಇದೆಯೇ ಎಂದು ನೋಡುತ್ತ ಸಿತಲಾ ಪ್ರತಿಕ್ರಿಯಿಸಿದರು.
ತನ್ನ ಮಕ್ಕಳು ಹಸಿವಿನಿಂದ ಸಾಯಬಾರದು ಅದಕ್ಕಾಗಿ ಏನಾದರೂ ಮಾಡಬೇಕು ಎಂಬ ಉದ್ದೇಶದಿಂದ ಪ್ರತೀ ವಾರ ಹಲವಾರು ಕಿಮೀ ದೂರ ನಡೆದು ಪಂಚಾಯ್ತಿ ಕಚೇರಿಗೆ ಸಿತಲಾ ಹೋಗುತ್ತಾರೆ. ಅಂತ್ಯೋದಯ ಕಾರ್ಡ್ಗೆ ಏನಾದರೂ ಸಿಗಲಿದೆಯಾ ಎಂಬ ಆಸೆಯೊಂದಿಗೆ ಹೋಗುತ್ತಾರೆ. ಮತ್ತೆ ಖಾಲಿ ಕೈಯಲ್ಲಿ ಮರಳುತ್ತಾರೆ. ಅಂತ್ಯೋದಯ ಯೋಜನೆ ಸಿತಲಾ ಕುಟುಂಬಕ್ಕೆ ಯಾವುದೇ ರೀತಿ ಪ್ರಯೋಜನಕ್ಕೆ ಬಂದಿಲ್ಲ.
“ಎಷ್ಟು ಬಾರಿ ಅಂತ ನಾವು ಹೋಗಿ ರೇಷನ್ ನೀಡುವಂತೆ ಕೇಳುವುದು. ಪ್ರತೀ ಬಾರಿ ಖಾಲಿ ಕೈಯಲ್ಲಿ ವಾಪಸ್ ಕಳಿಸುತ್ತಾರೆ,” ಎಂದು ನಿಟ್ಟುಸಿರಾಗುತ್ತಾರೆ ಸಿತಲಾ ಪಕ್ಕದ ಮನೆಯ ರಾಮಲತಾ.
ಬುದ್ನಿಯನ್ನು ಸೇರಿ ಕನಿಷ್ಟ 12 ಮಂದಿ ಕಳೆದ 10 ತಿಂಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ. ಆದರೆ ಸರ್ಕಾರಿ ಅಧಕಾರಿಗಳು ಮಾತ್ರ ಹಸಿವಿನಿಂದ ಮೃತ ಪಟ್ಟಿದ್ದನ್ನು ಒಪ್ಪಿಕೊಳ್ಳುತ್ತಿಲ್ಲ, ಜತೆಗೆ ರೇಷನ್ ನೀಡುತ್ತಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಿಲ್ಲ. ಸರ್ಕಾರದ ವೈಫಲ್ಯವನ್ನು ಒಪ್ಪಿಕೊಳ್ಳುವ ಮನಸ್ಸಿಲದಿದ್ದರೆ, ಸಮಸ್ಯೆಗೆ ಪರಿಹಾರ ನೀಡಬೇಕು ಇಲ್ಲವಾದರೆ ಒಪ್ಪಿಕೊಂಡು ಪರಿಹಾರ ಹುಡುಕಬೇಕು. ಆದರೆ ಜಾರ್ಖಂಡ್ನಲ್ಲಿ ಇವೆರಡೂ ಆಗುತ್ತಿಲ್ಲ. ಒಬ್ಬರಾದ ಮೇಲೊಬ್ಬರು ಹಸಿವಿನಿಂದ ಸಾಯುತ್ತಿದ್ದರೆ, ಸರ್ಕಾರ ಸಂಬಂಧವಿಲ್ಲದಂತೆ ಕೂತಿದೆ.
Comments are closed.