ಗೋರಖ್‌ಪುರ, ಉತ್ತರ ಪ್ರದೇಶ : ಇಲ್ಲಿನ ಗೋರಖನಾಥ ದೇವಸ್ಥಾನದಲ್ಲಿ ಗುರು ಪೂರ್ಣಿಮೆಯ ದಿನದಂದು ಸಮವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಯೋರ್ವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಅಂದ ಹಾಗೆ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ಮಠದ ಪೀಠಾಧೀಶ್ವರರೂ ಮಹಾಂತರೂ (ಮುಖ್ಯ ಅರ್ಚಕ) ಆಗಿದ್ದಾರೆ.
ವೈರಲ್ ಆಗಿರುವ ಫೋಟೋದಲ್ಲಿ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಅವರು ಆದಿತ್ಯನಾಥ್ ಅವರ ಕಾಲಿಗೆರಗಿ ಕೈಮುಗಿದು ಆಶೀರ್ವಾದ ಪಡೆಯುತ್ತಿರುವುದು ಕಂಡು ಬರುತ್ತದೆ. ಈ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪೊಲೀಸ್ ಇಲಾಖೆ ಪ್ರವೀಣ್ ಸಿಂಗ್ ಅವರ ನಿಲುವನ್ನು ಪ್ರಶ್ನಿಸಿ ಸ್ಪಷ್ಟೀಕರಣವನ್ನು ಕೇಳಿದೆ.
ಇದಕ್ಕೆ ಉತ್ತರವಾಗಿ ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್, “ನನ್ನನ್ನು ಭದ್ರತಾ ಕರ್ತವ್ಯದ ಮೇಲೆ ಗೋರಖನಾಥ ದೇವಾಲಯಕ್ಕೆ ನಿಯೋಜಿಸಲಾಗಿತ್ತು. ನನ್ನ ಕರ್ತವ್ಯ ಮುಗಿಸಿದ ಬಳಿಕ ನಾನು ಪೊಲೀಸ್ ಬೆಲ್ಟ್, ಕ್ಯಾಪ್ ಮತ್ತು ಇತರ ಚಿಹ್ನೆಗಳನ್ನು ತೆಗೆದಿರಿಸಿ ತಲೆಗೆ ಟವಲ್ ಸುತ್ತಿ ಶ್ರದ್ಧಾಭಕ್ತಿಯಿಂದ ಪೀಠಾಧೀಶ್ವರ, ಮಹಾಂತ, ಯೋಗಿ ಆದಿತ್ಯನಾಥರ ಆಶೀರ್ವಾದ ಪಡೆದಿದ್ದೇನೆ’ ಎಂದು ಹೇಳಿದ್ದಾರೆ.
“ನನ್ನ ಶರ್ಟ್ ಬೆವರಿನಿಂದ ಒದ್ದೆಯಾಗಿತ್ತು; ನಾನು ನನ್ನ ಕರ್ತವ್ಯವನ್ನು ನಿರ್ಲಕ್ಷಿಸಿಲ್ಲ; ಮಹಾಂತ ಯೋಗಿ ಅವರು ಎರಡು ಸಂದರ್ಭಗಳಲ್ಲಿ ದೇವಸ್ಥಾನದಲ್ಲಿ ಗುರು ಪೀಠದಲ್ಲಿ ಕುಳಿತುಕೊಳ್ಳುವುದು ರೂಢಿ – ಒಮ್ಮೆ ನವರಾತ್ರಿ ಸಂದರ್ಭದಲ್ಲಿ, ಇನ್ನೊಮ್ಮೆ ಗುರು ಪೂರ್ಣಿಮೆಯ ಸಂದರ್ಭದಲ್ಲಿ ; ನಾನು ಯಾವತ್ತೂ ದೇಶಕ್ಕೆ ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸೇವೆ ಸಲ್ಲಿಸಲು ಈ ದೇವಸ್ಥಾನದಲ್ಲಿ ಪ್ರಾರ್ಥಿಸುತ್ತೇನೆ. ಬಾಬಾ ಗೋರಖನಾಥ್ ಮೇಲಿನ ಶ್ರದ್ಧಾಭಕ್ತಿ ಭಾವದಿಂದ ನಾನು ದೇವಸ್ಥಾನಕ್ಕೆ ಹೋಗಿ ಗುರುಗಳ ಆಶೀರ್ವಾದ ಪಡೆದಿದ್ದೇನೆ ಹೊರತು ಬೇರೇನೂ ಅಲ್ಲ’ ಎಂದು ಸಿಂಗ್ ವಿವರಿಸಿದ್ದಾರೆ.
ಸಿಂಗ್ ಅವರು ಗೋರಖ್‌ಪುರದಲ್ಲಿ ಗೋರಖನಾಥಕ್ಕೆ ಸರ್ಕಲ್ ಆಫೀಸರ್ ಆಗಿ ನಿಯೋಜಿಸಲಾಗಿದೆ. ಪೌರ ರಕ್ಷಣೆಯ ಐಜಿ ಆಗಿರುವ ಅಮಿತಾಭ್ ಠಾಕೂರ್ (ಐಪಿಎಸ್) ಅವರು “ಈ ವಿಷಯದಲ್ಲಿ ಪೊಲೀಸ್ ಸೇವಾ ನಿಯಮ ಏನನ್ನೂ ಸ್ಪಷ್ಟವಾಗಿ ಹೇಳುವುದಿಲ್ಲ. ಈ ಸನ್ನಿವೇಶವನ್ನು ಹೇಗೆ ಬೇಕಾದರೂ ಅರ್ಥೈಸಬಹುದಾಗಿದೆ. ಆದರೆ ಪೊಲೀಸ್ ಅಧಿಕಾರಿ ತನ್ನ ಸಮವಸ್ತ್ರದ ಘನತೆಯನ್ನು ಎತ್ತಿ ಹಿಡಿಯುವುದು ಅಗತ್ಯ’ ಎಂದು ಹೇಳಿದ್ದಾರೆ.
Comments are closed.