ರಾಷ್ಟ್ರೀಯ

12 ಕಿ.ಮೀ. ಗರ್ಭಿಣಿಯ ಹೊತ್ತೊಯ್ದರೂ ಮೃತಪಟ್ಟ ಮಗು!

Pinterest LinkedIn Tumblr


ವಿಜಯನಗರಂ: ರಸ್ತೆ ಸೌಲಭ್ಯವೇ ಇಲ್ಲದ ಊರಿನಿಂದ ಅವಧಿಪೂರ್ವ ಪ್ರಸವವೇದನೆಯಿಂದ ಬಳಲುತ್ತಿದ್ದ ತುಂಬು ಗರ್ಭಿಣಿಯನ್ನು ಕಾಡಿನ ಹಾದಿಯಲ್ಲಿ ಡೋಲಿ(ಬಿದಿರಿನ ಕೋಲಿಗೆ ಸೀರೆ ಕಟ್ಟಿ ತಯಾರಿಸಿದ ಕೈಮಂಚ)ಯಲ್ಲಿ ಕರೆದೊಯ್ಯುವ ವೇಳೆ ಹಾದಿಮಧ್ಯದಲ್ಲೇ ಹೆರಿಗೆ ಸಂಭವಿಸಿ ಮಗು ಮೃತಪಟ್ಟ ಪ್ರಕರಣ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.

ಜಿಂದಮ್ಮ ಹೆಸರಿನ 22 ವರ್ಷದ ಗರ್ಭಿಣಿ ವಿಜಯನಗರಂನ ಗುಡ್ಡಗಾಡು ಪ್ರದೇಶದಲ್ಲಿ ವಾಸವಿದ್ದಾರೆ. ಅವರಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ. ಇದು ಮೂರನೇ ಹೆರಿಗೆಯಾಗಿದ್ದು, ಎಂಟು ತಿಂಗಳ ಗರ್ಭಿಣಿಯಾಗಿರುವಾಗಲೇ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಏಕಾಏಕಿ ನೋವು ಕಾಣಿಸಿಕೊಂಡಿದ್ದರಿಂದ ಆಕೆಯ ಗಂಡನಿಗೆ ತಕ್ಷಣಕ್ಕೆ ಆಸ್ಪತ್ರೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆಯಾಗಿಲ್ಲ.

ಹೀಗಾಗಿ ಕಾಡಿನ ಹಾದಿಯ ಮೂಲಕ ಡೋಲಿಯಲ್ಲಿ ಸ್ಥಳೀಯರ ಸಹಕಾರದೊಂದಿಗೆ ಜಿಂದಮ್ಮರನ್ನು 12 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ಯುವಾಗ ಕಾಡಿನ ಮಧ್ಯೆ ಹೆರಿಗೆಯಾಗಿದೆ. ಸಕಾಲದಲ್ಲಿ ಚಿಕಿತ್ಸೆ ದೊರಕದೇ ಇದ್ದಿದ್ದರಿಂದ ಮಗು ಮೃತಪಟ್ಟಿದ್ದು, ನಂತರ ಆಕೆಯನ್ನು ಪಾರ್ವತಿಪುರಂ ಐಟಿಡಿಎ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ರಕ್ತಸ್ರಾವದಿಂದ ಆಕೆ ನಿತ್ರಾಣಗೊಂಡಿದ್ದು ವೈದ್ಯರ ನಿಗಾದಲ್ಲಿ ಇರಿಸಲಾಗಿದೆ. ವಿಜಯನಗರಂನ ಕೊಂಡಂತಾಮರದಿಂದ ಸಾಲೂರ್‌ ಮಂಡಲ್‌ನ ದುಗ್ಗೆರುವಿಗೆ ರಸ್ತೆ ಸಂಪರ್ಕವಿಲ್ಲದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ತುಂಬು ಗರ್ಭಿಣಿ ಜಿಂದಮ್ಮಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೀಡಿಯೋ ಕೂಡ ವೈರಲ್ ಆಗಿದೆ.

Comments are closed.