ರಾಷ್ಟ್ರೀಯ

3ನೇ ಮಗು ಹೆರಿಗೆ ರಜೆ ನಿರಾಕರಣೆ ಅಸಾಂವಿಧಾನಿಕ: ಉತ್ತರಾಖಂಡ ಹೈಕೋರ್ಟ್‌

Pinterest LinkedIn Tumblr

ನೈನಿತಾಲ್‌ : ಮೂರನೇ ಮಗು ಹೆತ್ತ ಉದ್ಯೋಗಿಗೆ ಹೆರಿಗೆ ರಜೆ ನಿರಾಕರಿಸಿರುವ ರಾಜ್ಯ ಸರಕಾರದ ನಿಯಮ ಅಸಾಂವಿಧಾನಿಕ ಎಂದು ಉತ್ತರಾಖಂಡ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಹಲದ್ವಾನಿ ನಿವಾಸಿಯಾಗಿರುವ ರಾಜ್ಯ ಸರಕಾರಿ ಉದ್ಯೋಗಿ ಊರ್ಮಿಳಾ ಮನೀಷ್‌ ಅವರಿಗೆ ಮೂರನೇ ಮಗು ಹೆತ್ತದ್ದಕ್ಕೆ ಹೆರಿಗೆ ರಜೆ ನಿರಾಕರಿಸಲಾಗಿತ್ತು. ರಾಜ್ಯ ಸರಕಾರದ ಈ ನಿಯಮವನ್ನು ಪ್ರಶ್ನಿಸಿ ಅಕೆ ಹೈಕೋರ್ಟ್‌ ಮೆಟ್ಟಲೇರಿದ್ದರು.

ಜಸ್ಟಿಸ್‌ ರಾಜೀವ್‌ ಶರ್ಮಾ ಅವರ ಏಕ ಸದಸ್ಯ ಪೀಠವು ಉತ್ತರಾಖಂಡ ಸರಕಾರದ ಈ ನಿಯಮವು ಸಂವಿಧಾನದ ಅಶಯಕ್ಕೆ ವಿರುದ್ಧವಾದುದೆಂದು ತೀರ್ಪು ನೀಡಿದರು.

ಉತ್ತರ ಪ್ರದೇಶ ಮೂಲಭೂತ ನಿಯಮಗಳ ಹಣಕಾಸು ಕೈಪಿಡಿಯ ಎರಡನೇ ಪ್ರಾವಿಸೋ ಅಡಿಯ 153ನೇ ಮೂಲಭೂತ ನಿಯಮವು ಮೂರನೇ ಮಗು ಹೆತ್ತರೆ ಹೆರಿಗೆ ರಜೆಯನ್ನು ನಿರಾಕರಿಸುತ್ತದೆ. ಈ ನಿಯಮಾವಳಿಯನ್ನು ಉತ್ತರಾಖಂಡ ಸರಕಾರ ಯಥಾವತ್‌ ಎತ್ತಿಕೊಂಡಿದೆ.

ರಾಜ್ಯ ಸರಕಾರದ ಈ ನಿಯಮವು ಸಂವಿಧಾನದ 42ನೇ ವಿಧಿ ಮತ್ತು 1961ರ ಹೆರಿಗೆ ಸೌಲಭ್ಯ ಕಾಯಿದೆಯ ಸೆ.27ರ ಆಶಯಕ್ಕೆ ವಿರುದ್ಧವಾಗಿರುವುದರಿಂದ ಇದನ್ನು ಕಿತ್ತು ಹಾಕಬೇಕು ಎಂದು ತನ್ನ ಜು.30ರ ಆದೇಶದಲ್ಲಿ ಹೇಳಿದೆ. ಸಂವಿಧಾನದ 42ನೇ ವಿಧಿಯು ಮಹಿಳಾ ನೌಕರರಿಗೆ ನ್ಯಾಯೋಚಿತ ಮತ್ತು ಮಾನವೀಯ ಕೆಲಸದ ನಿಯಮ ಮತ್ತು ಹೆರಿಗೆ ಸೌಕರ್ಯಗಳ ಭರವಸೆ ನೀಡುತ್ತದೆ.

ಮನೀಶ್‌ ಅವರಿಗೆ ಈಗಾಗಲೇ ಎರಡು ಮಕ್ಕಳಿರುವುದರಿಂದ, ತನ್ನ ನಿಯಮಗಳ ಪ್ರಕಾರ, ಮೂರನೇ ಮಗುವಿಗಾಗಿ ಹೆರಿಗೆ-ರಜೆ ನೀಡುವಂತಿಲ್ಲ ಎಂದು ಉತ್ತರಾಖಂಡ ಸರಕಾರ ಹೇಳಿತ್ತು.

Comments are closed.