ಹೊಸದಿಲ್ಲಿ: ರಫೇಲ್ ಡೀಲ್ ಕುರಿತು ಫ್ರಾನ್ಸ್ನ ಮಾಜಿ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ ಹೇಳಿಕೆ ಹಿಂದೆ ‘ಏನೋ ಸಂಚು’ ಇರುವಂತಿದೆ; ಎರಡೂ ದೇಶಗಳ ಪ್ರತಿಪಕ್ಷಗಳ ನಾಯಕರು ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದು ಬರೇ ಕಾಕತಾಳೀಯವಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
‘ಇನ್ನು ಕೆಲವೇ ವಾರಗಳಲ್ಲಿ ದೊಡ್ಡ ಬಾಂಬ್ ಸ್ಫೋಟಿಸಲಿದೆ’ ಎಂದು ಆಗಸ್ಟ್ 30ರಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದು ಮತ್ತು ಫ್ರಾನ್ಸ್ನ ಮಾಜಿ ಅಧ್ಯಕ್ಷ ಹೊಲಾಂಡೆ ಹೇಳಿಕೆ ಈಗ ಪ್ರಕಟವಾಗಿರುವುದು ಬರೇ ಕಾಕತಾಳೀಯವಲ್ಲ ಎಂಬುದು ಸ್ಪಷ್ಟ. ಎರಡೂ ದೇಶಗಳ ವಿರೋಧ ಪಕ್ಷಗಳ ನಾಯಕರು ಒಂದೇ ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಜೇಟ್ಲಿ ಎಎನ್ಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ರಫೇಲ್ ಡೀಲ್ ವಿಚಾರದಲ್ಲಿ ರಾಹುಲ್ ಗಾಂಧಿ ಹೇಳಿಕೆಗೂ, ಹೊಲಾಂಡೆ ಹೇಳಿಕೆಗೂ ಸಂಬಂಧವಿರುವಂತಿದೆ ಎಂದು ಜೇಟ್ಲಿ ಸಂದೇಹ ವ್ಯಕ್ತಪಡಿಸಿದರು.
ರಫೇಲ್ ವ್ಯವಹಾರದಲ್ಲಿ ರಿಲಯನ್ಸ್ ಅನ್ನು ಭಾಗೀದಾರನೆಂದು ಪರಿಗಣಿಸುವಂತೆ ಭಾರತ ಸರಕಾರವೇ ಫ್ರಾನ್ಸ್ಗೆ ಸೂಚಿಸಿತ್ತು ಎಂದು ಫ್ರಾನ್ಸ್ನ ಮಾಜಿ ಅಧ್ಯಕ್ಷ ಹೊಲಾಂಡೆ ಸೆಪ್ಟೆಂಬರ್ 21ರಂದು ಹೇಳಿಕೆ ನೀಡಿದ್ದರು. ರಾಹುಲ್ ಗಾಂಧಿ ಕೂಡ ಆಗಸ್ಟ್ 30ರಂದು ಮಾಡಿದ ಟ್ವೀಟ್ನಲ್ಲಿ, ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಸುದ್ದಿ ಹೊರಬೀಳಲಿದೆ ಎಂದು ಹೇಳಿಕೊಂಡಿದ್ದರು. ಈ ಎರಡೂ ಹೇಳಿಕೆಗಳು ಪರಸ್ಪರ ಪೂರಕವಾಗುವಂತೆ ಹೆಣೆಯಲ್ಪಟ್ಟಿದೆ ಎಂದು ಜೇಟ್ಲಿ ಶಂಕಿಸಿದರು.
‘ರಾಹುಲ್ ಗಾಂಧಿ ಸೇಡಿನ ಹಾದಿಯಲ್ಲಿರುವಂತೆ ತೋರುತ್ತದೆ. ಇಡೀ ಪ್ರಕರಣವೇ ಪೂರ್ವ ನಿರ್ದೇಶಿತವಾಗಿದ್ದರೆ ಅಚ್ಚರಿಯಿಲ್ಲ. ರಾಹುಲ್ ಮಾಡಿದ ಟ್ವೀಟ್ನಲ್ಲಿ, ‘ಸ್ವಲ್ಪ ದಿನ ಕಾಯಿರಿ, ಪ್ಯಾರಿಸ್ನಲ್ಲಿ ಕೆಲವು ಬಾಂಬ್ಗಳು ಸ್ಫೋಟವಾಗಲಿದೆ’ ಎಂದಿದ್ದರು. ಅವರ ಬಹಳ ಚೆನ್ನಾಗಿ ಊಹಿಸಿರುವಂತಿದೆ ಎಂದು ಜೇಟ್ಲಿ ನುಡಿದರು.
ಬಳಿಕ ಫ್ರೆಂಚ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೊಲಾಂಡೆ, ಡಸಾಲ್ಟ್ ಕಂಪನಿಗೆ ಪಾಲುದಾರನಾಗಿ ರಿಲಯನ್ಸ್ ಆಯ್ಕೆ ಮಾಡುವಲ್ಲಿ ಫ್ರೆಂಚ್ ಸರಕಾರದ ಪಾತ್ರವೇನೂ ಇರಲಿಲ್ಲ ಎಂದು ಹೇಳಿದ್ದರು.
ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣದ ಆರೋಪಗಳನ್ನು ನಿರಾಕರಿಸಿರುವ ಜೇಟ್ಲಿ, ಹೆಚ್ಚಿನ ಬೆಲೆಗೆ ವಿಮಾನಗಳನ್ನು ಖರೀದಿಸಲಾಗುತ್ತಿದೆಯೇ ಎಂಬುದು ವಿಷಯವಲ್ಲ; ಅವ್ಯವಹಾರ ನಡೆದಿದೆಯೇ ಎಂದು ಪರಿಶೀಲಿಸುವುದು ಸಿಎಜಿ ಕೆಲಸ ಎಂದು ನುಡಿದರು.
ಯಾವುದೇ ಆರೋಪಗಳಿದ್ದರೂ ರಫೇಲ್ ಡೀಲ್ ರದ್ದಾಗದು. ರಫೇಲ್ ವ್ಯವಹಾರ ಅತ್ಯಂತ ಪಾರದರ್ಶಕವಾಗಿದ್ದು ಯಾವ ಕಾರಣಕ್ಕೂ ರದ್ದಾಗದು ಎಂದು ಜೇಟ್ಲಿ ಸ್ಪಷ್ಟಪಡಿಸಿದರು.
Comments are closed.