ಬೆಂಗಳೂರು: ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಅವರು 2022ರ ವೇಳೆಗೆ ಮಾನವ ಸಹಿತ ಬಾಹ್ಯಾಕಾಶ ನೌಕೆ ಉಡಾವಣೆ ಮಾಡುವುದಾಗಿ ಘೋಷಿಸುತ್ತ, ದೇಶದ ಪುತ್ರಿ ಅಥವಾ ಪುತ್ರ ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡು ಆಕಾಶಕ್ಕೆ ನೆಗೆಯಲಿದ್ದಾರೆ ಎಂದಿದ್ದರು. ಪ್ರಧಾನಿ ಈ ಘೋಷಣೆ ಮಾಡಿದಾಗ ಇಸ್ರೋಗೆ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ತಮ್ಮ ಕಡೆಯಿಂದ ಗಗನಯಾತ್ರೆಗೆ ತೆರಳುವವರು ಯಾರೆಂಬ ಬಗ್ಗೆ ಸುಳಿವಿರಲಿಲ್ಲ. ಆದರೆ ದೇಶದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯ ನಿರ್ವಹಣೆಯ ಹೊಣೆ ಬಾಹ್ಯಾಕಾಶ ಯೋಜನೆಗಳಲ್ಲಿ 30 ವರ್ಷ ಅನುಭವ ಹೊಂದಿರುವ ತನ್ನ ಹಿರಿಯ ಮಹಿಳಾ ವಿಜ್ಞಾನಿ ಡಾ.ವಿ.ಆರ್. ಲಲಿತಾಂಬಿಕ ಅವರ ಹೆಗಲಿಗೇರಲಿದೆ ಎಂಬುದು ಮಾತ್ರ ಸ್ಪಷ್ಟವಾಗಿತ್ತು.
56 ವರ್ಷದ ಲಲಿತಾಂಬಿಕಾ ಫೆಬ್ರವರಿ 15, 2017ರಂದು ಒಂದೇ ರಾಕೆಟ್ನಿಂದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿ ಐತಿಹಾಸಿಕ ಸಾಧನೆ ಮಾಡಿದ್ದ ತಂಡದ ಪ್ರಮುಖ ಸದಸ್ಯರಷ್ಟೇ ಅಷ್ಟೇ, 100 ಬಾಹ್ಯಾಕಾಶ ಯಾತ್ರೆಗಳನ್ನು ಕಾರ್ಯಗತಗೊಳಿಸುವಲ್ಲಿ ಅವರ ಪಾತ್ರ ಮಹತ್ತರವಾದುದು. ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಅವರೊಂದಿಗೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಇಸ್ರೋದೊಂದಿಗಿನ ತಮ್ಮ ಸಿಹಿಕಹಿ ಅನುಭವಗಳನ್ನು, ಮಾನವ ಸಹಿತ ಬಾಹ್ಯಾಕಾಶ ಯೋಜನೆಯ ಬಗೆಗಿನ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ. ಸಂದರ್ಶನದ ಆಯ್ದ ಭಾಗಗಳು ಇಲ್ಲಿವೆ.
ಪ್ರ: 2022ರ ಹೊತ್ತಿಗೆ ಗಗನಯಾನ ಯೋಜನೆ ಕಾರ್ಯಗತವಾಗಬೇಕಿದೆ. ಇದರಲ್ಲಿ ನಿಮ್ಮ ಪಾತ್ರವೇನು?
ಉ: ಮಾನವಸಹಿತ ಬಾಹ್ಯಾಕಾಶ ಯೋಜನೆಯ ನಿರ್ದೇಶನಾಲಯ ಇತ್ತೀಚೆಗೆ ಇಸ್ರೋ ಪ್ರಧಾನ ಕಚೇರಿಯಲ್ಲಿ ಸ್ಥಾಪಿಸಲ್ಪಟ್ಟಿದೆ. ನಾನು ಈ ಯೋಜನೆಯ ನಿರ್ದೇಶಕಿ, DHSP . ಮಿಷನ್ ಪೂರ್ಣಗೊಳಿಸಲು ನಾವು ಇಸ್ರೊ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ಇಸ್ರೋದ ಎಲ್ಲ ಕೇಂದ್ರಗಳು ಸಹ ಯೋಜನೆಯ ಪಾತ್ರವಾಗಲಿವೆ. ಶಿಕ್ಷಣ ತಜ್ಞರು ಮತ್ತು ಉದ್ಯಮ ವಲಯವನ್ನು ಸಹ ಈ ಯೋಜನೆಯಲ್ಲಿ ಸೇರಿಸಿಕೊಳ್ಳಲಾಗುವುದು. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ.
ಪ್ರ: ವಿದ್ಯಾರ್ಥಿಯಾಗಿದ್ದಾಗ ನಿಮ್ಮನ್ನು ಬಾಹ್ಯಾಕಾಶ ವಿಜ್ಞಾನಕ್ಕೆ ಸೆಳೆದಿದ್ದೇನು?
ಉ: ನನ್ನ ಅಜ್ಜನದು ಬಹುಮುಖ ವ್ಯಕ್ತಿತ್ವ. ಒಬ್ಬ ಗಣಿತಜ್ಞನಷ್ಟೇ ಅಲ್ಲದೆ ಅವರೊಬ್ಬ ಖಗೋಳಶಾಸ್ತ್ರಜ್ಞ ಮತ್ತು ಗ್ಯಾಜೆಟ್ ತಯಾರಕರಾಗಿದ್ದರು. ಮನೆಯಲ್ಲಿಯೇ ಮಸೂರ, ದೂರದರ್ಶಕ ಮತ್ತು ಸೂಕ್ಷ್ಮದರ್ಶಕಗಳನ್ನು ತಯಾರಿಸುತ್ತಿದ್ದರು. ಅವರಿಂದಾಗಿ ಬಾಲ್ಯದಿಂದಲೇ ನಾನು ವಿಜ್ಞಾನ ಮತ್ತು ತಂತ್ರಜ್ಞಾನದ ಒಡನಾಟದಲ್ಲಿ ಬೆಳೆದೆ. ತಿರುವನಂತಪುರಂನಲ್ಲಿ ನನ್ನ ಮನೆ ಇದ್ದು ರಾಕೆಟ್ ಪರೀಕ್ಷಾ ಕೇಂದ್ರ ಬಹಳ ಹತ್ತಿರದಲ್ಲಿತ್ತು. ಮನೆಯಿಂದಲೇ ರಾಕೆಟ್ ಉಡಾವಣೆಗಳನ್ನು ವೀಕ್ಷಿಸಬಹುದಿತ್ತು. ನನ್ನ ಅಜ್ಜ ಪ್ರತಿ ಸಂಜೆ ಎಲ್ಲಾ ಮುಂಬರುವ ಉಡಾವಣೆಗಳ ಬಗ್ಗೆ ಎಚ್ಚರಿಕೆ ಮತ್ತು ಇಸ್ರೋ ಕಾರ್ಯಾಚರಣೆ ಬಗ್ಗೆ ಹೇಳುತ್ತಿದ್ದರು. ಸಹಜವಾಗಿ ಬಾಲ್ಯದಲ್ಲಿಯೇ ನಾನು ಇಸ್ರೋ ಕಡೆ ಆಕರ್ಷಿತಳಾದೆ. ನನ್ನ ತಂದೆ, ಪತಿ ಕೂಡ ಎಂಜಿನಿಯರ್ ಆಗಿದ್ದು, ನಮ್ಮದು ಎಂಜಿನಿಯರ್ ಕುಟುಂಬ.
ಪ್ರ: ಗೇಟ್ ಪರೀಕ್ಷೆ ಪಾಸಾದರೂ ಎಮ್. ಟೆಕ್ ಮಾಡಲು ಐಐಟಿ ಸೇರದೆ ವಿವಾಹವಾಗಿದ್ದೇಕೆ?
ಉ: ತಿರುವನಂತಪುರಂನಲ್ಲಿ ಬಿ. ಟೆಕ್ ಮುಗಿಸಿದ ನಾನು ಕಾಲೇಜಿಗೆ ಟಾಪರ್ ಆಗಿದ್ದೆ. ಬಳಿಕ ವಿವಾಹವಾಗಿ ಕಂಟ್ರೋಲ್ ಎಂಜಿನಿಯರಿಂಗ್‌ನಲ್ಲಿ ಎಮ್.ಟೆಕ್ ಪದವಿ ಪಡೆದೆ. ನನ್ನ ಹೆಚ್ಚಿನ ಸಾಧನೆಗಳೆಲ್ಲವೂ ವಿವಾಹೋತ್ತರ ಕಾಲಘಟ್ಟದಲ್ಲೇ ನಡೆದಿದ್ದು. 1988ರಲ್ಲಿ ನಾನು ಇಸ್ರೋ ಸೇರಿದಾಗ ನನಗೆ 2 ವರ್ಷದ ಮಗುವಿತ್ತು. ಪತಿಯೇ ಮಗು ಸೇರಿದಂತೆ ಮನೆಯ ಜವಾಬ್ದಾರಿ ಹೊತ್ತುಕೊಂಡರು. ಬಳಿಕ ಇನ್ನೊಂದು ಮಗುವಿನ ತಾಯಿಯಾದೆ. ಬಳಿಕವಷ್ಟೇ ನಾನು ಪಿಹೆಚ್‌ಡಿ ಮಾಡಿದ್ದು. ನನ್ನಲ್ಲ ಸಾಧನೆ ಹಿಂದೆ ಪತಿ ಮತ್ತು ಪೋಷಕರ ಸಹಕಾರ, ಪ್ರೋತ್ಸಾಹವಿದೆ. ನಾನೀಗ 2 ಮೊಮ್ಮಕ್ಕಳ ಅಜ್ಜಿ.
ಪ್ರ: ಇಸ್ರೋದಲ್ಲಿನ ನಿಮ್ಮ 30 ವರ್ಷದ ಅನುಭವದಲ್ಲಿ PSLV, GSLVಯಂತಹ ಅನೇಕ ಸವಾಲಿನ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮಾಡಿದ್ದೀರಿ. ನೀವು ಮರೆಯಲಾಗದಂತಹ ಸಾಧನೆ, ತಪ್ಪು ಯಾವುದು?
ಉ:ನನ್ನ 30ವರ್ಷದ ಸೇವಾನುಭವದಲ್ಲಿ ಸೋಲು ಮತ್ತು ಯಶಸ್ಸುಗಳೆರಡನ್ನು ನೋಡಿದ್ದೇನೆ. 1988ರಲ್ಲಿ ನಾನು ಇಸ್ರೋ ಸೇರಿದ 2-3 ತಿಂಗಳಲ್ಲಿ ನಾವು ಸೆಕೆಂಡ್ ASLV, ಬಳಿಕ ಫಸ್ಟ್ PSLV ವಿಫಲವಾದವು. ಸೋಲಿನೊಂದಿಗೆ ನನ್ನ ನೇರ ಅನುಭವ ಮೊದಲ PSLVಯೊಂದಿಗಿದ್ದು. ಇದೊಂದು ಆಘಾತಕಾರಿ ಅನುಭವ. ಅದರಿಂದ ನಾವು ಬಹಳಷ್ಟು ಕಲಿತಿದ್ದೇವೆ. ಬಳಿಕ ನಾವು ಸಿಮ್ಯುಲೇಶನ್‌ಗಳ ಮೇಲೆ ಗಮನ ಕೇಂದ್ರೀಕರಿಸಿದೆವು. ಅದೇ ಕೊನೆಯದು, ಬಳಿಕ PSLV ಎಂದಿಗೂ ವಿಫಲವಾಗಲೇ ಇಲ್ಲ ಮತ್ತು ಇಸ್ರೋದ ಅತ್ಯಂತ ವಿಶ್ವಾಸಾರ್ಹ ಕೆಲಸವೆನಿಸಿಕೊಂಡಿತು. ನಾನು ಕಂಟ್ರೋಲ್ ಇಂಜಿನಿಯರ್ ಆಗಿದ್ದು PSLV ಯೋಜನೆಯಲ್ಲಿ ಇದೇ ಹುದ್ದೆಯಲ್ಲಿ ಕೆಲಸ ಆರಂಭಿಸಿದ್ದೆ. ಬಳಿಕ ಇಸ್ರೋದ ಎಲ್ಲ ಯೋಜನಗಳ ಭಾಗವಾಗಿದ್ದೇನೆ. ಬೆಂಗಳೂರಿನಲ್ಲಿರುವ ಇಸ್ರೋ ಕೇಂದ್ರ ಕಾರ್ಯಾಲಯಕ್ಕೆ ಬರುವ ಮುನ್ನ ನಾನು ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಉಪ ನಿರ್ದೇಶಕಿ (ನಿಯಂತ್ರಣ, ಮಾರ್ಗದರ್ಶನ ಮತ್ತು ಸಿಮ್ಯುಲೇಶನ್)ಯಾಗಿದ್ದೆ.
ಪ್ರ: ಕುಶಲ ಮಾತೃತ್ವ ಮತ್ತು ಬೇಡಿಕೆಯ ವೃತ್ತಿಗೆ ಸಂಬಂಧಿಸಿದಂತೆ ನಿಮ್ಮ ಸಲಹೆ?
ಉ: ಉದ್ಯೋಗಿ ತಾಯಿಗೆ ಕೌಟುಂಬಿಕ ಸಹಕಾರ ಎಂಬುದು ದೇವರ ಆಶೀರ್ವಾದದಂತೆ. ಕೌಟುಂಬಿಕ ಬೆಂಬಲದಿಂದ ವಂಚಿತ ದುಡಿಯುವ ಮಹಿಳೆ ನಿಜಕ್ಕೂ ತುಂಬ ಕಷ್ಟಪಡಬೇಕಾಗುತ್ತದೆ. ಬದುಕಿನುದ್ದಕ್ಕೂ ಪತಿ ಮತ್ತು ಪೋಷಕರ ಬೆಂಬಲವೇ ನನಗೆ ಸಿಕ್ಕಿರುವ ದೊಡ್ಡ ಅದೃಷ್ಟ. ಇದು ಸಮಯ ನಿರ್ವಹಣೆ ಮತ್ತು ಕೌಟುಂಬಿಕ ಬೆಂಬಲದ ಪ್ರಶ್ನೆ.
ಪ್ರ: ಲಿಂಗ ಅಸಮಾನತೆ ಈಗಲೂ ಚಾಲಿಯಲ್ಲಿದೆ. STEM(ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ) ಕ್ಷೇತ್ರದಿಂದ ಮಹಿಳೆಯರನ್ನು ಹೊರಗಿಡುತ್ತಿರುವುದರ ಬಗ್ಗೆ ನೀವೇನು ಹೇಳುತ್ತೀರಿ?
ಉ: ನಾನು ಹುಟ್ಟಿದ್ದು ಮತ್ತು ಬೆಳೆದಿದ್ದು ಕೇರಳದಲ್ಲಿ ಮತ್ತು ನನ್ನ ಬದುಕಿನುದ್ದಕ್ಕೂ ಒಮ್ಮೆ ಕೂಡ ಲಿಂಗ ತಾರತಮ್ಯವನ್ನು ಎದುರಿಸಿಲ್ಲ.
Comments are closed.