ರಾಷ್ಟ್ರೀಯ

ದರೋಡೆಕೋರರಿಂದ ರಕ್ಷಿಸಿದ್ದಕ್ಕೆ ಟೀ ಶರ್ಟ್ ಬಹುಮಾನ; 70 ಲಕ್ಷ ಕದ್ದು ಪರಾರಿ

Pinterest LinkedIn Tumblr


ಹೊಸದಿಲ್ಲಿ: ದರೋಡೆಕೋರರು ಮಾಲೀಕನ ಹಣದ ಬ್ಯಾಗ್ ಕಿತ್ತುಕೊಳ್ಳುವಾಗ ಹೋರಾಡಿ ರಕ್ಷಿಸಿದ್ದ ಆತ ಕೊನೆಗೆ ತಾನೇ ಮಾಲೀಕನ 70 ಲಕ್ಷ ರೂ ಕದ್ದು ಪರಾರಿಯಾದ ಸ್ವಾರಸ್ಯಕರ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.

ಆರೋಪಿಯನ್ನು ಧನ್ ಸಿಂಗ್ ಬಿಶ್ತ್ ಎಂದು ಗುರುತಿಸಲಾಗಿದ್ದು ಸ್ನೇಹಿತ ಯಾಕೂಬ್ ಜತೆಗೆ ಭಾರಿ ಮೊತ್ತದ ಕಳ್ಳತನ ಮಾಡಿ ನೈನಿತಾಲ್‌ಗೆ ಪರಾರಿಯಾಗಿದ್ದ. ಯಾಕೂಬ್ ಇತ್ತೀಚಿಗೆ ದೆಹಲಿಗೆ ಬಂದಿದ್ದು ಆತನನ್ನು ಬಂಧಿಸಿದಾಗ ಈ ಕಳ್ಳತನಕ್ಕೆ ಕಾರಣವೇನೆಂಬ ಸತ್ಯ ಹೊರಬಿದ್ದಿದೆ.

ತನ್ನ ಮಾಲೀಕನ ಬಳಿ ತುಂಬ ದುಡ್ಡಿದೆ ಎಂದು ಬಿಶ್ತ್ ಆಗಾಗ ಹೇಳುತ್ತಿದ್ದ. ಒಮ್ಮೆ ಮಾಲೀಕ 80 ಲಕ್ಷ ಹಣದೊಂದಿಗೆ ಹೋಗುತ್ತಿದ್ದಾಗ ದರೋಡೆಕೋರರು ದಾಳಿ ಮಾಡಿದ್ದರು. ಆದರೆ ಬಿಶ್ತ ಅವರಿಂದ ಮಾಲೀಕ ಮತ್ತವನ ಹಣವನ್ನು ಕಾಪಾಡಿದ್ದ. ಘಟನೆಯಲ್ಲಿ ಗಾಯಗೊಂಡಿದ್ದ ಆತ ತನ್ನ ಸಾಹಸಕ್ಕೆ ಪ್ರತಿಯಾಗಿ ದೊಡ್ಡ ಮೊತ್ತದ ನಗದು ಬಹುಮಾನ ಸಿಗುತ್ತದೆ ಎಂಬು ನಿರೀಕ್ಷಿಸಿದ್ದ. ಆದರೆ ಮಾಲೀಕ ಕೊಟ್ಟಿದ್ದು ಒಂದು ಟೀ ಶರ್ಟ್. ಅದವನಿಗೆ ಅಸಮಧಾನ ತಂದಿತ್ತು.

ತನ್ನ ಮೂವರು ಮಗಳ ಮದುವೆ ಜವಾಬ್ದಾರಿ ಹೊಂದಿದ್ದ ಬಿಶ್ತ್ ಗಾಯಗೊಂಡು ಹಾಸಿಗೆ ಹಿಡಿದಿದ್ದ. ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರೂ ದುಡಿದು ಮಕ್ಕಳ ಮದುವೆ ಮಾಡಿಸಲು ತನ್ನಿಂದ ಸಾಧ್ಯವಿಲ್ಲವೆಂದು ಯೋಚಿಸಿದ ಆತ ತನ್ನ ಮಾಲೀಕ ಹಣವನ್ನು ಬ್ಯಾಂಕ್‌ಗೆ ಡಿಪಾಸಿಟ್ ಮಾಡಲು ಹೇಳಿದಾಗ ಕದ್ದು ಪರಾರಿಯಾಗಲು ನಿರ್ಧರಿಸಿದ ಎಂದು ಪೊಲೀಸ್ ವಿಚಾರಣೆ ವೇಳೆ ಯಾಕೂಬ್ ಹೇಳಿದ್ದಾನೆ.

ಆಗಸ್ಟ್ 28, ಬಿಶ್ತ್‌ನ ಮಾಲೀಕ ತನ್ನ ಗ್ರಾಹಕನಿಂದ ಹಣ ಸಂಗ್ರಹಿಸಲು ಕಳೆಸಿದ. ಹಣ ಸಂಗ್ರಹಿಸಿದ ಬಳಿಕ ಯಾಕೂಬ್‌ನನ್ನು ಸಂಪರ್ಕಿಸಿದ ಬಿಶ್ತ್ ಯಾಕೂಬ್ ಮನೆಯಲ್ಲಿ ತನ್ನ ಬೈಕ್ ನಿಲ್ಲಿಸಿ, ಆತನ ಕಾರಿನಲ್ಲಿ ನೈನಿತಾಲ್‌ಗೆ ಪರಾರಿಯಾಗಿದ್ದ.

ಬಿಶ್ತ್‌ನನ್ನು ನೈನಿತಾಲ್‌ ತಲುಪಿಸಿ ದೆಹಲಿಗೆ ಬಂದು ಆತನ ಬೈಕ್ ಮಾರಿ ಮರಳಿ ನೈನಿತಾಲ್‌ಗೆ ಹೋಗಲು ಪ್ರಯತ್ನಿಸುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Comments are closed.