ನವದೆಹಲಿ: ಸಿಕ್ಕಿಂ ರಾಜ್ಯದ ರಾಜಧಾನಿ ಬಳಿಯಿರುವ ಪಾಕ್ಯೊಂಗ್ ವಿಮಾನ ನಿಲ್ದಾಣದ ಉದ್ಘಾಟನೆಗೆ ತೆರಳಿದ್ದ ಪ್ರಧಾನಿ ಮೋದಿ ಅಲ್ಲಿನ ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಫೋಟೋಗ್ರಾಫರ್ ಆಗಿದ್ದು, ರಮಣೀಯ ನಿಸರ್ಗದ ಫೋಟೋಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ವೇಳೆ ಭಾರತದ ಪ್ರವಾಸೋದ್ಯಮ ಇಲಾಖೆಯ ಘೋಷಣೆಯಾದ ಇನ್‍ಕ್ರೆಡಿಬಲ್ ಇಂಡಿಯಾ ಎಂಬ ಹಣೆ ಬರಹವನ್ನು ಪ್ರಧಾನಿಗಳು ನೀಡಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೋದಿ, ಈ ವಿಮಾನ ನಿಲ್ದಾಣ ರೂಪಿಸುವಲ್ಲಿ ಶ್ರಮವಹಿಸಿದ ಎಂಜಿನಿಯರ್ ಗಳನ್ನು ನಾನು ಅಭಿನಂದಿಸುತ್ತೇನೆ. ದೇಶದಲ್ಲಿ ಒಟ್ಟು 100 ವಿಮಾನ ನಿಲ್ದಾಣಗಳನ್ನು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 35 ವಿಮಾನ ನಿಲ್ದಾಣಗಳು ಕಳೆದ 4 ವರ್ಷದಲ್ಲಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಪಾಕ್ಯೊಂಗ್ ನಲ್ಲಿ ಸಿಕ್ಕಿಂ ರಾಜ್ಯದ ಪ್ರಪ್ರಥಮ ನ್ಯೂ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದೆ. ಒಟ್ಟು 605.59 ಕೋಟಿ ರೂಪಾಯಿ ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡಿದೆ. ಈ ವಿಮಾನ ನಿಲ್ದಾಣವು ಈಗಾಗಲೇ ಸಿವಿಲ್ ಏವಿಯೇಷನ್ ಇಲಾಖೆಯ ವಾಣಿಜ್ಯ ಹಾರಾಟದ ಅನುಮತಿಯನ್ನು ಸಹ ಪಡೆದುಕೊಂಡಿದೆ. ಅಕ್ಟೋಬರ್ 4 ರಿಂದ ವಾಣಿಜ್ಯ ಬಳಕೆಯ ವಿಮಾನಗಳು ಅಧಿಕೃತವಾಗಿ ಹಾರಾಟ ನಡೆಸಲಿದೆ.
2009ರಲ್ಲಿ ಕೇಂದ್ರ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಪಾಕ್ಯೊಂಗ್ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದರು. ಕಾಮಗಾರಿ ಆರಂಭಗೊಂಡ ಬಳಿಕ ಸ್ಥಳಿಯ ನಿವಾಸಿಗಳು ಪರಿಹಾರ ನಿಧಿ ಮತ್ತು ಪುನರ್ವಸತಿ ಕಲ್ಪಿಸುವ ವಿಚಾರವಾಗಿ ಭಾರೀ ಪ್ರತಿಭಟನೆ ನಡೆಸಿದ ಕಾರಣ ನಿರ್ಮಾಣ ಕಾಮಗಾರಿ 2014ರವರೆಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. 2015ರಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮತ್ತು ಸಿಕ್ಕಿಂ ರಾಜ್ಯ ಸರ್ಕಾರಗಳು ಪರಿಹಾರ ನಿಧಿ ವಿಚಾರವಾಗಿ ಒಡಂಬಡಿಕೆ ಪತ್ರ(ಎಂಒಯು) ಸಹಿ ಹಾಕಿದ ಬಳಿಕ ಕಾಮಗಾರಿ ಆರಂಭಗೊಂಡು 9 ವರ್ಷಗಳ ನಂತರ ಉದ್ಘಾಟನೆಯಾಗಿದೆ.
Comments are closed.