ರಾಷ್ಟ್ರೀಯ

ಸರಕಾರದ ವಿವಿಧ ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಕುರಿತು ಇಂದು ಸುಪ್ರೀಂ ಕೋರ್ಟಿನಿಂದ ಮಹತ್ವದ ತೀರ್ಪು

Pinterest LinkedIn Tumblr


ನವದೆಹಲಿ: ಸರಕಾರದ ವಿವಿಧ ಸೇವೆಗಳಿಗೆ ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಬೇಕೋ ಅಥವಾ ಬೇಡವೋ ಎಂಬ ಗೊಂದಲಗಳಿಗೆ ಸುಪ್ರೀಂಕೋರ್ಟ್ ತೆರೆ ಎಳೆಯಲಿದೆ. ಐದು ಸದಸ್ಯರ ಸುಪ್ರೀಮ್ ಕೋರ್ಟ್ ಸಾಂವಿಧಾನಿಕ ಪೀಠ ಬುಧವಾರ ಮಹತ್ವದ ತೀರ್ಪು ನೀಡಲಿದೆ. ಆಧಾರ್ ಕಾರ್ಡ್​ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 29 ಅರ್ಜಿಗಳು ಕೋರ್ಟ್​ಗೆ ಸಲ್ಲಿಕೆಯಾಗಿದ್ದವು. ಜನವರಿ 17ರಂದು ಈ ಅರ್ಜಿಗಳ ಅಂತಿಮ ವಿಚಾರಣೆ ಕೈಗೆತ್ತಿಕೊಂಡ ನ್ಯಾಯ ಪೀಠವು ನಾಲ್ಕು ತಿಂಗಳ ಅವಧಿಯಲ್ಲಿ 38 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತು. ಮೇ 10ರಂದು ವಿಚಾರಣೆ ಮುಕ್ತಾಯಗೊಳಿಸಿದ ಸುಪ್ರೀಂಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಅದೀಗ ಬುಧವಾರ ಪ್ರಕಟವಾಗುತ್ತಿದೆ.

ವಿರೋಧ ಯಾಕೆ?
ಆಧಾರ್ ಯೋಜನೆಯು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಗೌಪ್ಯತೆ ಕಾಪಾಡಿಕೊಳ್ಳುವ ಮೂಲಭೂತ ಹಕ್ಕನ್ನು ಸಂವಿಧಾನ ಒದಗಿಸಿದೆ. ಆದರೆ, ಆಧಾರ್ ಕಾರ್ಡ್​ನಿಂದಾಗಿ ವ್ಯಕ್ತಿ ತನ್ನ ಗೌಪ್ಯತೆ ಉಳಿಸಿಕೊಳ್ಲಲು ಸಾಧ್ಯವಾಗುವುದಿಲ್ಲ. ಆಧಾರ್​ನ ಮಾಹಿತಿ ಸುಲಭವಾಗಿ ಸೋರಿಕೆಯಾಗುತ್ತದೆ. ಆಧಾರ್ ಸುರಕ್ಷಿತವಲ್ಲ. ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುತ್ತದೆ ಎಂಬುದು ಒಂದು ಪ್ರಮುಖ ವಾದವಾಗಿದೆ. ಹಾಗೆಯೇ, ಆಧಾರ್ ಕಾರ್ಡ್​ನಿಂದಾಗಿ ಸರಕಾರದ ಹಲವಾರು ಕಲ್ಯಾಣ ಯೋಜನೆಗಳ ಲಾಭವು ಫಲಾನುಭವಿಗಳನ್ನು ಮುಟ್ಟುತ್ತಿಲ್ಲ ಎಂಬುದು ಇನ್ನೊಂದು ಬಲವಾದ ಆರೋಪವಾಗಿದೆ.

ಹಾಗೆಯೇ, ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸುವ ಮಸೂದೆಗೆ ಸಂಸತ್​ನಲ್ಲಿ ಒಪ್ಪಿಗೆ ಸಿಕ್ಕದೇ ಹೋದಾಗ ಕೇಂದ್ರ ಸರಕಾರವು ಹಣಕಾಸು ಮಸೂದೆ ಹೆಸರಲ್ಲಿ ಪರೋಕ್ಷವಾಗಿ ಸಂಸತ್​ನಲ್ಲಿ ಮಂಡನೆ ಮಾಡಿತು. ಇದನ್ನೂ ಆಕ್ಷೇಪಿಸಿ ಸುಪ್ರೀಂಕೋರ್ಟ್​ ಮೊರೆಹೋಗಲಾಗಿತ್ತು. ವಿಚಾರಣೆ ವೇಳೆ ಈ ವಿಚಾರದ ಬಗ್ಗೆ ಕೇಂದ್ರ ಸರಕಾರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

ದೂರುದಾರರ ಪರವಾಗಿ ಕಪಿಲ್ ಸಿಬಲ್, ಪಿ. ಚಿದಂಬರಮ್, ರಾಕೇಶ್ ದ್ವಿವೇದಿ, ಶ್ಯಾಮ್ ದಿವಾನ್, ಅರವಿಂದ್ ದಾತರ್ ಮೊದಲಾದವರು ಸಾಂವಿಧಾನಿಕ ಪೀಠದಲ್ಲಿ ವಾದ ಮಂಡಿಸಿದ್ದರು.

ಹಾಗೆಯೇ, ಮೊಬೈಲ್ ನಂಬರ್​ಗಳ ವೆರಿಫಿಕೇಶನ್​ಗೆ, ಬ್ಯಾಂಕ್ ಖಾತೆಗೆ ಸೇರಿದಂತೆ ಬಹುತೇಕ ಸೇವೆಗಳಿಗೆ ಆಧಾರ್ ಕಾರ್ಡ್​ನ್ನು ಕಡ್ಡಾಯಗೊಳಿಸಲು ಕೇಂದ್ರ ಸರಕಾರ ಕೈಗೊಂಡ ನಿರ್ಧಾರ ಕಟು ಟೀಕೆಗೆ ಒಳಗಾಗಿದೆ. ಕೋರ್ಟ್​ನಲ್ಲಿ ಈ ಕುರಿತು ಸುದೀರ್ಘ ವಿಚಾರಣೆಯಾಗಿದೆ. ಈ ವೇಳೆ, ಕೇಂದ್ರ ಸರಕಾರ ತನ್ನ ನಿಲುವನ್ನು ಸಮರ್ಥಿಸಿಕೊಳ್ಳಲು ಹಿಂದಿನ ಸುಪ್ರೀಂಕೋರ್ಟ್ ತೀರ್ಪನ್ನೇ ಉಲ್ಲೇಖಿಸಿತು. ಮೊಬೈಲ್ ವೆರಿಫಿಕೇಶನ್ ನಡೆಸಬೇಕೆಂದು ಹಿಂದೊಂದು ಬಾರಿ ಕೋರ್ಟ್ ತಾಕೀತು ಮಾಡಿತ್ತು. ವೆರಿಫಿಕೇಶನ್ ಮಾಡದೇ ಹೋದರೆ ನ್ಯಾಯಾಲಯ ಆದೇಶ ಧಿಕ್ಕಿರಿಸದಂತಾಗುತ್​ತದೆ. ಅದಕ್ಕಾಗಿ ಆಧಾರ್ ಕಾರ್ಡ್ ಮೂಲಕ ವೆರಿಫಿಕೇಶನ್ ಮಾಡಲು ನಿರ್ಧರಿಸಿದೆವು ಎಂದು ಕೇಂದ್ರ ಸರಕಾರ ಮಾಡಿದ ವಾದವನ್ನು ಸುಪ್ರೀಮ್ ಕೋರ್ಟ್ ಒಪ್ಪಿಕೊಳ್ಳಲಿಲ್ಲ. ತನ್ನ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಾ ಎಂದು ಕೇಂದ್ರಕ್ಕೆ ತಿಳಿಹೇಳಿತ್ತು.

ಇದೀಗ ವಾದ, ಪ್ರತಿವಾದಗಳೆಲ್ಲಾ ಮುಗಿದಿದ್ದು, ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ| ಎ.ಕೆ. ಸಿಕ್ರಿ, ನ್ಯಾ| ಎ.ಎಂ. ಖನ್ವಿಲ್ಕರ್, ನ್ಯಾ| ಡಿ.ವೈ. ಚಂದ್ರಚೂಡ್ ಮತ್ತು ನ್ಯಾ| ಅಶೋಕ್ ಭೂಷಣ್ ಅವರು ತೀರ್ಪು ಕೊಡಲಿದ್ದಾರೆ. ಸೇವಾವಧಿ ಮುಗಿಯಲು ದಿನಗಣನೆಯಲ್ಲಿರುವ ಮುಖ್ಯನ್ಯಾಯಮೂರ್ತಿಗಳ ಬಳಿ ಇರುವ ಮಹತ್ವದ ಕೇಸ್​ಗಳಲ್ಲಿ ಇದೂ ಒಂದಾಗಿದೆ. ಈ ಹಿನ್ನೆಲೆಯಲ್ಲೂ ಸುಪ್ರೀಂಕೋರ್ಟ್​ನ ತೀರ್ಪಿನ ಬಗ್ಗೆ ಕುತೂಹಲ ಮನೆ ಮಾಡಿದೆ.

Comments are closed.