ರಾಷ್ಟ್ರೀಯ

ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ; ಬ್ಯಾಂಕ್, ಮೊಬೈಲ್ ಸೇವೆ, ಶಾಲೆ, ಆಸ್ಪತ್ರೆಗಳಿಗೆ ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ಬಹು ನಿರೀಕ್ಷಿತ ಆಧಾರ್ ಸಿಂಧುತ್ವದ ಕುರಿತು ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದ್ದು, ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಆಧಾರ್ ಸಿಂಧುತ್ವ ಕುರಿತಂತೆ ಸುಪ್ರೀಂ ಕೋರ್ಟಿನಲ್ಲಿ ಇಂದು ಮಹತ್ವದ ತೀರ್ಪು ಇಂದು ಹೊರಬಿದ್ದಿದ್ದು, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಈ ತೀರ್ಪು ನೀಡಿದೆ.

ಒಟ್ಟು 40 ಪುಟಗಳ ತೀರ್ಪಿನ ಸಾರಾಂಶವನ್ನು ನ್ಯಾಯಮೂರ್ತಿ ಎಕೆ ಸಿಕ್ರಿ ಅವರು ಓದಿದ್ದು, ಖಾಸಗೀತನದ ಹಕ್ಕು ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ, ಆಧಾರ್ ಸಮಾಜ ಒಂದು ವರ್ಗಕ್ಕೆ ಘನತೆಯಿಂದ ಬದುಕುವ ಮಾರ್ಗವನ್ನು ನೀಡಿದೆ ಎಂದು ಹೇಳಿದ್ದಾರೆ.

ಇನ್ನು ಶಿಕ್ಷಣ ಸಂಸ್ಥೆ, ಬ್ಯಾಂಕ್‍ಗಳಲ್ಲಿ ಆಧಾರ್ ಕಡ್ಡಾಯವಲ್ಲ ಎಂದು ಹೇಳಿರುವ ಕೋರ್ಟ್, ಸರ್ಕಾರದ ಯೋಜನೆಗಳಿಗೆ ಮಾತ್ರ ಆಧಾರ್ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ. ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿ ತಿರುಚಲು ಸಾಧ್ಯವಿಲ್ಲ. ಆಧಾರ್ ಕಾರ್ಡ್ ನಕಲಿ ಮಾಡಲು ಸಾಧ್ಯವಿಲ್ಲ. ನಕಲಿ ಸೃಷ್ಠಿ ಮಾಡಲು ಅವಕಾಶ ಇದ್ದರೆ ಅದನ್ನು ತಡೆಗಟ್ಟಿ, ಆಧಾರ್ ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಎಂದು ಕೋರ್ಟ್ ಆದೇಶಿಸಿದೆ.

ಇತ್ತ ಬ್ಯಾಂಕಿಂಗ್ ಸೇವೆಗಳಿಗೂ ಆಧಾರ್ ಕಡ್ಡಾಯವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದ್ದು, ಆದರೆ ಪ್ಯಾನ್ ಕಾರ್ಡ್ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದೆ. ಉಳಿದಂತೆ ಮೊಬೈಲ್ ಸೇವೆಗಳಿಗೆ ಆಧಾರ್ ಕಡ್ಡಾಯವಲ್ಲ ಎಂದು ಕೋರ್ಟ್ ಹೇಳಿದ್ದು, ಪ್ರಮುಖ ಪರೀಕ್ಷೆಗಳಾದ ಸಿಬಿಎಸ್ ಇ, ನೀಟ್ ನಂತಹ ಪರೀಕ್ಷೆಗಳಲ್ಲಿ ಆಧಾರ್ ಕಡ್ಡಾಯಗೊಳಿಸಬಾರದು ಮಾತ್ರವಲ್ಲ ಹೊಸ ಬ್ಯಾಂಕ್ ಖಾತೆ ತೆರಯಲೂ ಕೂಡ ಆಧಾರ್ ಕಡ್ಡಾಯವಾಗಿ ನೀಡಬೇಕು ಎಂದು ಕೇಳಬಾರದು ಎಂದು ಹೇಳಿದೆ.

ಅಂತೆಯೇ ಸರ್ಕಾರಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲ ಆಸ್ಪತ್ರೆಗಳಲ್ಲಿ ಆಧಾರ್ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ. ಮಾತ್ರವಲ್ಲದೆ ಆಧಾರ್ ಕಾಯ್ದೆಯ ಸೆಕ್ಷನ್ 57ನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಖಾಸಗಿ ಸಂಸ್ಥೆಗಳಿಗೆ ಅಥವಾ ಕಾರ್ಪೊರೇಟ್ ಸಂಸ್ಥೆಗಳಿಗೆ ಬಯೋಮೆಟ್ರಿಕ್ ಮಾಹಿತಿಯನ್ನು ನೀಡುವಂತಿಲ್ಲ. ಖಾಸಗಿ ಕಂಪನಿಗಳು ಆಧಾರ್ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

Comments are closed.