ಹೈದರಾಬಾದ್: ಮೊಬೈಲ್ ನಲ್ಲಿ ತನ್ನ ಗೆಳತಿಯೊಡನೆ ಯಾವಾಗಲೂ ಚಾಟ್ ಮಾಡುತ್ತಿದ್ದ ಪತಿಗೆ ಪತ್ನಿ ಬೈದದ್ದಕ್ಕೆ ಮನನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ಆತನೊಡನೆ ಚಾಟ್ ಮಾಡುತ್ತಿದ್ದ ಗೆಳತಿ ಸಹ ತಾನೂ ವಿಷ ಸೇವಿಸಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಹೈದರಾಬಾದ್, ಸಿಕಂದರಾಬಾದ್ ನ ಈಸ್ಟ್ ಮರ್ರೆದ್ಪಲ್ಲಿ ಪ್ರದೇಶದ ನಿವಾಸಿಯಾಗಿದ್ದ ಕೆ. ಶಿವಕುಮಾರ್ (27) ಪತ್ನಿಯ ಮಾತಿನಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ, ಆತನ ಸಾವಿನಿಂದ ಖಿನ್ನಳಾದ ಅವನ ಗೆಳತಿ ಸಿ. ವೆನೇಲಾ (19) ತಾನು ಸಹ ವಿಷ ಸೇವಿಸಿ ಮೃತಪಟ್ಟಿದ್ದಾರ್ತೆ ಎಂದು ಪೋಲೀಸರು ಮಾಹಿತಿ ನೀಡಿದರು.
ಎಲೆಕ್ಟ್ರಿಷಿಯನ್ ಆಗಿದ್ದ ಶಿವಕುಮಾರ್ ಶನಿವಾರ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೇ ಸುದ್ದಿ ತಿಳಿದ ಸ್ನೇಹಿತೆ ವೆನೇಲಾ ಭಾನುವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಅಸುನೀಗಿದ್ದಾಳೆ.
ಶಿವಕುಮಾರ್ ಗೆ ಇದೇ ವರ್ಷ ಆಗಸ್ಟ್ 15ರಂದು ಮದುವೆಯಾಗಿತ್ತು. ಆದರೆ ಪತಿ-ಪತ್ನಿಯರು ಚಿಕ್ಕ ವಿಚಾರಗಳಿಗೆ ಸಹ ಜಗಳ ಕಾಯುತ್ತಿದ್ದರು. ಇಷ್ಟರ ನಡುವೆ ಪತಿ ಸದಾ ವಾಟ್ಸ್ ಅಪ ನಲ್ಲಿ ಬೇರೊಬ್ಬ ಯುವತಿಯೊಡನೆ ಚಾಟ್ ಮಾಡುತ್ತಿದ್ದಾರೆ ಎನ್ನುವ ವಿವರ ಪತ್ನಿಗೆ ತಿಳಿದಿದೆ. ಇದರಿಂದ ಇಬ್ಬರ ನಡುವಿನ ಜಗಳ ಇನ್ನಷ್ಟು ಬಿರುಸು ಪಡೆದುಕೊಂಡಿತ್ತು ಎಂದು ಪೋಲೀಸರು ವಿವರಿಸಿದ್ದಾರೆ.
ಜಗಳ ಪ್ರತಿನಿತ್ಯವೂ ನಡೆಯುತ್ತಿದ್ದು ಇದರಿಂದ ಮಾನಸಿಕವಾಗಿ ಜರ್ಜರಿತನಾದ ಶಿವಕುಮಾರ್ ಶನಿವಾರ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿವಕುಮಾರ್ ನ ಬಾಲ್ಯದ ಗೆಳತಿಯಾಗಿದ್ದ ವೆನೇಲಾ ಅವನ ಸಾವಿನ ವಿಚಾರದಿಂದ ಖಿನ್ನಗೊಂಡು ತಾನು ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ.
Comments are closed.