ನವದೆಹಲಿ: ಕಳೆದ ವಾರ ಸುಪ್ರೀಂಕೋರ್ಟ್ ಪಾಲಿಗೆ ಬಿಡುವಿಲ್ಲದ ವಾರ. ದಿನಕ್ಕೊಂದರಂತೆ ಪ್ರಮುಖ ತೀರ್ಪುಗಳನ್ನು ನೀಡುವ ಮೂಲಕ ಹಲವು ಐತಿಹಾಸಿಕ ಪ್ರಕರಣಗಳಿಗೂ ಮುಕ್ತಿ ಕೊಟ್ಟಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಅಧಿಕಾರಾವಧಿಯ ಕೊನೆಯ ದಿನವಿದು.
1977ರಿಂದ ವಕೀಲಿ ವೃತ್ತಿ ಆರಂಭಿಸಿದ ದೀಪಕ್ ಮಿಶ್ರಾ ಇಂದು ಸಂಜೆ ನಿವೃತ್ತಿ ಪಡೆದಿದ್ದಾರೆ. ಅ. 3ರಿಂದ ರಂಜನ್ ಗೊಗೋಯ್ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಗಾಗಿ, ಇಂದು ಸಹಜವಾಗಿಯೇ ಮಿಶ್ರಾ ಕೊಂಚ ಭಾವುಕರಾಗಿದ್ದರು. ಬರೋಬ್ಬರಿ 41 ವರ್ಷಗಳ ಕಾಲ ಕರಿಕೋಟಿನ ಸಖ್ಯ ಹೊಂದಿದ್ದ ಅವರಿಗೆ ಇಂದು ಸುಪ್ರೀಂಕೋರ್ಟ್ನಲ್ಲಿ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.
ಕಳೆದ ಆಗಸ್ಟ್ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಮಿಶ್ರಾ ನೀಡಿದ ತೀರ್ಪುಗಳಲ್ಲಿ ಶಬರಿ ಮಲೆಗೆ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ, ವಿವಾಹಿತ ಮಹಿಳೆ ಪರಪುರುಷನೊಂದಿಗೆ ಸಂಬಂಧ ಹೊಂದುವುದು ತಪ್ಪಲ್ಲ, ಸಲಿಂಗಪ್ರೇಮ ಅಪರಾಧವಲ್ಲ, ಆಧಾರ್ ಸಡಿಲಗೊಳಿಸುವಿಕೆಯ ತೀರ್ಪುಗಳು ಮಹತ್ವದ್ದು. ಐತಿಹಾಸಿಕ ತೀರ್ಪುಗಳಿಂದ ಜನಮನ್ನಣೆ ಗಳಿಸಿದ್ದ ದೀಪಕ್ ಮಿಶ್ರಾ ಹಲವು ವಿವಾದಗಳಿಗೂ ಸಿಲುಕಿದ್ದರು. ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್ನ ನಾಲ್ವರು ನ್ಯಾಯಮೂರ್ತಿಗಳು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿ ದೀಪಕ್ ಮಿಶ್ರಾ ವಿರುದ್ಧ ಆರೋಪ ಮಾಡಿದ್ದು ಸುಪ್ರೀಂಕೋರ್ಟ್ ಇತಿಹಾಸದಲ್ಲಿ ಹೊಸ ಮುನ್ನುಡಿ ಬರೆದಿತ್ತು. ಪ್ರಕರಣಗಳನ್ನು ಹಂಚುವಾಗ ತಾರತಮ್ಯ ಮಾಡುತ್ತಾರೆ ಎಂಬ ಆರೋಪವನ್ನು ಅವರ ಮೇಲೆ ಮಾಡಲಾಗಿತ್ತು.
ನ್ಯಾ. ದೀಪಕ್ ಮಿಶ್ರಾ ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಿದ್ದವರಲ್ಲಿ ರಂಜನ್ ಗೊಗಾಯ್ ಕೂಡ ಇದ್ದಿದ್ದರಿಂದ ಹಾಗೂ ಇಬ್ಬರಿಗೂ ಅನೇಕ ಖಾಸಗಿ ಭಿನ್ನಾಭಿಪ್ರಾಯಗಳು ಇದ್ದ ಕಾರಣದಿಂದ ಅವರ ನಿವೃತ್ತಿಯ ನಂತರ ರಂಜನ್ ಗೊಗೋಯ್ ಅವರನ್ನು ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಶಿಫಾರಸು ಮಾಡುತ್ತಾರಾ? ಇಲ್ಲವಾ? ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿತ್ತು. ಆದರೆ, ಗೊಗೋಯ್ ಅವರ ಹೆಸರನ್ನು ಶಿಫಾರಸು ಮಾಡಿರುವ ಮಿಶ್ರಾ ಇಂದು ತಮ್ಮ ಸ್ಥಾನದಿಂದ ನಿವೃತ್ತಿ ಪಡೆದಿದ್ದಾರೆ.
ಕೊನೆಯ ದಿನ ಹೇಗಿತ್ತು?
ಮುಂದಿನ ಸಿಜೆ ರಂಜನ್ ಗೊಗೋಯ್ ಅವರೊಂದಿಗೆ ಇಂದು ಸುಪ್ರೀಂಕೋರ್ಟ್ಗೆ ಆಗಮಿಸಿದ ದೀಪಕ್ ಮಿಶ್ರಾ ಕೋರ್ಟ್ ಆವರಣದಲ್ಲಿ ನೀಡಿದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾವುಕರಾದಂತೆ ಕಂಡುಬಂದರು. ಇಂದು ಬೆಳಗ್ಗೆ ಮಿಶ್ರಾ ಅವರ ನಿವೃತ್ತಿ ಜೀವನ ಸಂತೋಷದಿಂದ ಕೂಡಿರಲೆಂದು ಹಾರೈಸಿ ವಕೀಲರೊಬ್ಬರು ಹಿಂದಿ ಸಿನಿಮಾದ ‘ತುಮ್ ಜಿಯೋ ಹಜಾರೋಂ ಸಾಲ್’ ಹಾಡು ಹಾಡಲಾರಂಭಿಸಿದರು. ಅವರನ್ನು ಅರ್ಧಕ್ಕೆ ತಡೆದ ದೀಪಕ್ ಮಿಶ್ರಾ, ‘ಈಗ ನಾನು ನನ್ನ ಹೃದಯಾಂತರಾಳದಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ. ಸಂಜೆ ನಾನು ನನ್ನ ಮನಸಿನಿಂದ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಭಾವುಕರಾದರು.
Comments are closed.