ರಾಷ್ಟ್ರೀಯ

ಮೊಬೈಲ್‌ ಬಳಕೆದಾರರೇ, ಮತ್ತೆ ಕೆವೈಸಿ ಪ್ರಕ್ರಿಯೆಗೆ ಸಿದ್ಧರಾಗಿ!?

Pinterest LinkedIn Tumblr


ಹೊಸದಿಲ್ಲಿ: ಮೊಬೈಲ್‌ ಸಿಮ್‌ ಪಡೆಯಲು ನೀವು ಆಧಾರ್‌ ಸಂಖ್ಯೆ ನೀಡಿರುವಿರಾ? ಹಾಗಾದರೆ, ಮತ್ತೆ ನಿಮ್ಮ ಗುರುತು ದೃಢೀಕರಿಸುವ ಕೆವೈಸಿ(ಗ್ರಾಹಕರ ವಿವರ ದೃಢೀಕರಿಸುವ ದಾಖಲೆಗಳು) ಪ್ರಕ್ರಿಯೆಗೆ ಒಳಗಾಗಬೇಕಾಗುತ್ತದೆ! ಆಧಾರ್‌, ಹೊರತಾದ ಗುರುತಿನ ದಾಖಲೆಗಳನ್ನು ನೀವು ಸಲ್ಲಿಸುವ ಅಗತ್ಯ ತಲೆದೋರಲಿದೆ ಎಂದು ಮೂಲಗಳು ಹೇಳಿವೆ.

ಕಳೆದ ವಾರ ಸುಪ್ರೀಂ ಕೋರ್ಟ್‌, ಆಧಾರ್‌ ಕಾಯ್ದೆಯ ಸೆಕ್ಷನ್‌ 57 ಅನ್ನು ರದ್ದು ಮಾಡಿದೆ. ಅದರ ಅನ್ವಯ, ಮೊಬೈಲ್‌ ಸಂಪರ್ಕಕ್ಕೆ ಆಧಾರ್‌ ಅನ್ನು ಟೆಲಿಕಾಂ ಕಂಪನಿಗಳು ಕೇಳುವಂತಿಲ್ಲ. ಹೀಗಾಗಿ, ಗ್ರಾಹಕರಿಂದ ಗುರುತು ದೃಢೀಕರಿಸುವ ಹೊಸ ದಾಖಲೆಗಳನ್ನು ಕಂಪನಿಗಳು ಪಡೆಯಬೇಕಾಗುತ್ತದೆ.

ಈ ಮೊದಲು ಆಧಾರ್‌ ಅನ್ನು ಮೊಬೈಲ್‌ ಸಂಪರ್ಕಕ್ಕೆ ಸರಕಾರವು ಕಡ್ಡಾಯಗೊಳಿಸಿತ್ತು. ಆಗ ಆಧಾರ್‌ ಅನ್ನು ಮೊಬೈಲ್‌ ಸಂಖ್ಯೆ ಜೊತೆ ಜೋಡಣೆ ಮಾಡಲು ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಒತ್ತಾಯಿಸಿದ್ದವು. ಈಗ, ಆಧಾರ್‌ ಹೊರತಾಗಿ ಇತರೆ ಮಾಹಿತಿಯನ್ನು ಕಂಪನಿಗಳು ಕೇಳಲಿವೆ. ಈ ಸಂಬಂಧಿ ಎಸ್‌ಎಂಎಸ್‌ಗಳು ಗ್ರಾಹಕರ ಮೊಬೈಲ್‌ಗಳಿಗೆ ಸದ್ಯದಲ್ಲಿಯೇ ಬರಲಿವೆ ಎಂದು ಹೇಳಲಾಗಿದೆ.

ಆಧಾರ್‌ನಂತೆ ಯಾವ ಗುರುತಿನ ದಾಖಲೆಗಳನ್ನು ಟೆಲಿಕಾಂ ಕಂಪನಿಗಳು ಪಡೆಯಲಿವೆ ಎನ್ನುವ ಮಾಹಿತಿ ಅಕ್ಟೋಬರ್‌ ಕೊನೆಯ ಹೊತ್ತಿಗೆ ಸ್ಪಷ್ಟವಾಗಲಿದೆ. ತಮ್ಮ ಕ್ರಿಯಾಯೋಜನೆ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕಂಪನಿಗಳು ಅ.15ರಂದು ಮಾಹಿತಿ ನೀಡಬೇಕಾಗಿದೆ.

Comments are closed.