ರಾಷ್ಟ್ರೀಯ

ಪಂಚರಾಜ್ಯಗಳ ಚುನಾವಣಾ ಸಮೀಕ್ಷೆ: 3ರಲ್ಲಿ ಕಾಂಗ್ರೆಸ್​​ಗೆ ಗೆಲುವು, ಬಿಜೆಪಿಗೆ ಸೋಲು

Pinterest LinkedIn Tumblr


ನವದೆಹಲಿ: ಕೇಂದ್ರ ಚುನಾವಣಾ ಆಯೋಗವೂ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಈ ಬೆನ್ನಲ್ಲೇ ಐದು ರಾಜ್ಯಗಳಲ್ಲಿ ಚುನಾವಣೆಗೆ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಬಿಜೆಪಿ ಮತ್ತು ಕಾಂಗ್ರೆಸ್​​ ನಡುವೆ ನೇರ ಚುನಾವಾಣ ಕದನ ನಡೆಯಲಿದೆ. ಈಗಾಗಲೇ ಉಭಯ ಪಕ್ಷದ ನಾಯಕರು ಚುನಾವಣಾ ಪ್ರಚಾರವೂ ಶುರು ಮಾಡಿದ್ದು, ತಮ್ಮ ಪಕ್ಷಕ್ಕೆ ಮತ ನೀಡುವಂತೆ ಜನರ ಬಳಿ ಹೋಗಿದ್ಧಾರೆ.

ಈ ಮಧ್ಯೆ ‘ಎಬಿಪಿ ನ್ಯೂಸ್​​’ ಎಂಬ ಖಾಸಗಿ ಸುದ್ದಿವಾಹಿನಿಯೊಂದು ಚುನಾವಣಾಪೂರ್ವ ಸಮೀಕ್ಷೆ ನಡೆಸಿ ಬಿಜೆಪಿಗೆ ಆಘಾತಕಾರಿ ಸುದ್ದಿ ನೀಡಿದೆ. ಸಮೀಕ್ಷೆಯ ಪ್ರಕಾರ ಐದು ರಾಜ್ಯಗಳ ಪೈಕಿ ಬಿಜೆಪಿ ಆಡಳಿತರೂಢ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್​​ ಗೆಲುವು ಸಾಧಿಸಲಿದೆ ಎನ್ನಲಾಗಿದೆ. ಆದರೆ, ಸಮೀಕ್ಷೆ ನುಡಿದಿರುವ ಭವಿಷ್ಯ ನಿಜವಾಗುತ್ತೋ, ಸುಳ್ಳಾಗುತ್ತೋ ಎಂಬುದು ಖಾತ್ರಿಯಾಗಲು ಡಿಸೆಂಬರ್​​​.11ಕ್ಕೆ ಪ್ರಕಟವಾಗುವ ಫಲಿತಾಂಶದವರೆಗೂ ಕಾಯಬೇಕಿದೆ ಎನ್ನುತ್ತಾರೆ ರಾಜಕೀಯ ತಜ್ಞರು.

ಎಬಿಪಿ ನ್ಯೂಸ್​​ ಸಮೀಕ್ಷೆ: ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್​​ಗಢ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಜಯ ಗಳಿಸಲಿದ್ದು, ಬಿಜೆಪಿ ಸೋಲುನುಭವಿಸಲಿದೆ ಎಂದು ಎಬಿಪಿ ನ್ಯೂಸ್ ನಡೆಸಿದ ಜನಮತ ಸಮೀಕ್ಷೆಯಲ್ಲಿ ಬಯಲಾಗಿದೆ. ಹೀಗಾಗಿ ಕಳೆದ 5 ವರ್ಷಗಳಿಂದ ಅಧಿಕಾರ ಕಳೆದುಕೊಂಡು ಪರಿತಪಿಸುತ್ತಿದ್ದ ಕೈಪಾಳೆಯದ ಕನಸು ಶೀಘ್ರದಲ್ಲೇ ನನಸಾಗಲಿದೆ ಎನ್ನುತ್ತಿವೆ ಸಮೀಕ್ಷೆ ಮೂಲಗಳು.

ರಾಜಸ್ಥಾನ: ಕಳೆದ 2013 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ನಗೆ ಬೀರಿತ್ತು. ಆದರೆ, ಈ ಬಾರಿ ಒಟ್ಟು ರಾಜಸ್ಥಾನದ 200 ಸ್ಥಾನಗಳ ಪೈಕಿ 142 ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಬಿಜೆಪಿ ಸಂಖ್ಯಾಬಲ 56 ಕ್ಕೆ ಕುಸಿಯಲಿದೆ. ಅಲ್ಲದೇ ಇನ್ನೆರಡು ಸ್ಥಾನಗಳು ಇತರೆ ಪಕ್ಷಗಳ ಪಾಲಾಗಲಿವೆ. ಈ ಮೂಲಕ ಬಿಜೆಪಿ ನಾಯಕಿ ವಸುಂಧರ ರಾಜೇ ಸಿಂಧ್ಯಾ ಅವರ ನೇತೃತ್ವದಲ್ಲಿ ಎರಡನೇ ಬಾರಿ ಮತ್ತೆ ಅಧಿಕಾರಕ್ಕೇರುವುದು ಅಸಾಧ್ಯ ಎನ್ನಲಾಗುತ್ತಿದೆ.

ಮಧ್ಯಪ್ರದೇಶ: ರಾಜ್ಯದ 230 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯಲಿದೆ. ಈ ಪೈಕಿ ಬಿಜೆಪಿಗೆ ಕೇವಲ 108 ಸೀಟುಗಳು, ಕಾಂಗ್ರೆಸ್ ಮಾತ್ರ 122 ಸೀಟುಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಸ್ಪಷ್ಟ ಬಹುಮತ ಪಡೆಯಲಿದೆ. ಹೀಗಾಗಿ ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಂಡಿರುವ ಕನಸು ನುಚ್ಚುನೂರಾಗಲಿದೆ ಎಂದು ಸಮೀಕ್ಷೆ ಹೇಳುತ್ತಿದೆ.

ಛತ್ತೀಸ್​​ಗಢ: ಇನ್ನು ಛತ್ತೀಸ್​​ಗಢದಲ್ಲಿಯೂ ವಿಧಾನಸಭೆ ಚುನಾವಣೆಗೆ ಸಕಲ ಸಿದ್ದತೆಗಳು ನಡೆಯುತ್ತಿವೆ. ನೇರಾನೇರ ಕಾಂಗ್ರೆಸ್ ಮತ್ತು ಆಡಳಿತರೂಢ ಬಿಜೆಪಿ ನಡುವೆ ಚುನಾವಣಾ ಸಮರ ನಡೆಯಲಿದೆ. 90 ಕ್ಷೇತ್ರಗಳಿರುವ ಈ ರಾಜ್ಯದಲ್ಲಿ ಕಾಂಗ್ರೆಸ್ 47, ಬಿಜೆಪಿಗೆ 40 ಮತ್ತು ಇತರ ಪಕ್ಷಗಳು 3 ಸ್ಥಾನಗಳನ್ನು ಸಿಗಲಿವೆ. ಈ ಬಾರಿ ಕಮಲ ಎಷ್ಟೇ ಪ್ರಯತ್ನಿಸಿದರೂ ಅರಳುವ ಸಾಧ್ಯತೆಗಳು ಕಡಿಮೆ ಎನ್ನುತ್ತಿವೆ ಮೂಲಗಳು.

ಕೇಂದ್ರದಲ್ಲಿ ಮತ್ತೆ ಬಿಜೆಪಿ: ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದರೂ, ಲೋಕಸಭೆ ಚುನಾವಣೆಯಲ್ಲಿ ಮಾತ್ರ ನರೇಂದ್ರ ಮೋದಿಯವರದ್ದೇ ಪಾರುಪತ್ಯ. ಪ್ರಧಾನಿ ಪಟ್ಟಕ್ಕೆ ರಾಹುಲ್​​ ಅವರನ್ನು ಚುನಾಯಿಸಲು ಜನ ಭಾರೀ ಹಿಂದೇಟು ಹಾಕಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ವರ್ಸಸ್​​​ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎನ್ನುವ ಯಾವುದೇ ಸ್ಪರ್ಧೆ ಇಲ್ಲ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

Comments are closed.