ಗುಜರಾತ್: ವಾಟ್ಸಾಪ್ನಲ್ಲಿ ಹಬ್ಬಿದ್ದ ಮಕ್ಕಳ ಕಳ್ಳರ ವದಂತಿಯಿಂದ ಅದೆಷ್ಟೋ ಅಮಾಯಕರು ಜನಸಮೂಹದಿಂದ ಹತ್ಯೆಯಾಗಿದ್ದು ಕಣ್ಮುಂದೆ ಇನ್ನೂ ಹಸಿರಾಗಿದೆ. ಈಗ ಗುಜರಾತ್ನಲ್ಲಿ ಸಂಭವಿಸಿದ ಒಂದು ಅತ್ಯಾಚಾರ ಘಟನೆಯು ಗುಜರಾತ್ನಲ್ಲಿರುವ ವಲಸಿಗರ ಪ್ರಾಣಕ್ಕೆ ಕುತ್ತು ತಂದಿದೆ. ವಲಸಿಗರ ವಿರುದ್ಧ ವಾಟ್ಸಾಪ್ನಲ್ಲಿ ಸೇಡಿನ ಸಂದೇಶಗಳು ಹರಿದಾಡುತ್ತಿದ್ದ, ಗುಜರಾತ್ನ ಅನೇಕ ಕಡೆ ವಲಸಿಗರ ಮೇಲೆ ದಾಳಿಗಳಾಗುತ್ತಿವೆ. ಅದರಲ್ಲೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ನೂರಾರು ವಲಸಿಗರು ಸಿಕ್ಕಸಿಕ್ಕ ಬಸ್ಸು, ಟ್ರೈನುಗಳನ್ನ ಹಿಡಿದುಕೊಂಡು ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ಸಾಗುತ್ತಿದ್ಧಾರೆ.
ಕಳೆದ ವಾರ, ಸೆ. 28ರಂದು ಗುಜರಾತ್ನ ಸಬರ್ಕಾಂತ ಜಿಲ್ಲೆಯ ಹಿಮ್ಮತ್ನಗರ್ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಹಾರೀ ಮೂಲದ ರವೀಂದ್ರ ಸಾಹು ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಅತ್ಯಾಚಾರದಲ್ಲಿ ಬಿಹಾರಿ ವ್ಯಕ್ತಿಯ ಕೈ ಇರುವುದು ಬೆಳಕಿಗೆ ಬಂದ ನಂತರ ಗುಜರಾತ್ನಲ್ಲಿ ವಾಟ್ಸಾಪ್ನಲ್ಲಿ ವಲಸಿಗರ ವಿರುದ್ಧ ಆಕ್ರೋಶ ಸಂದೇಶಗಳು ವೈರಲ್ ಆಗುತ್ತಿವೆ. ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ವ್ಯಕ್ತಿಗಳಿಂದ ಅಪರಾಧ ಕೃತ್ಯಗಳು ನಡೆಯುತ್ತಿದೆ ಎಂದು ಈ ಸಂದೇಶಗಳಲ್ಲಿ ಆರೋಪಿಸಲಾಗುತ್ತಿದೆ. ಇದರಿಂದ ಸ್ಥಳೀಯ ಗುಜರಾತಿ ಜನರು ತಮ್ಮ ಪ್ರದೇಶದ ವಲಸಿಗರನ್ನು ಅನುಮಾನದಿಂದ ನೋಡುತ್ತಿದ್ದಾರೆ. ಹಲವು ಕಡೆ ಹಿಂಸಾಚಾರಗಳು ನಡೆದಿವೆ. ಅತ್ಯಾಚಾರಕ್ಕೊಳಗಾದ ಮಗು ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದ್ದಾದ್ದರಿಂದ ಠಾಕೂರ್ ಸೇನಾ ಸಂಘಟನೆಯ ಕಾರ್ಯಕರ್ತರು ದೊಡ್ಡ ದೊಂಬಿ ನಡೆಸಿದ್ದಾರೆ. ಅಕ್ಟೋಬರ್ 2ರಂದು ಮೆಹ್ಸಾನ ಜಿಲ್ಲೆಯ ಫ್ಯಾಕ್ಟರಿಯೊಂದಕ್ಕೆ ನುಗ್ಗಿದ 200 ಜನರು ಅಲ್ಲಿಯ ಇಬ್ಬರು ನೌಕರರ ಮೇಲೆ ಹಲ್ಲೆ ಮಾಡಿದ್ದಾರೆ. ಗುಜರಾತ್ನ ವಿವಿಧೆಡೆ ಇಂತಹ ಹಲವು ದಾಳಿಗಳಾಗಿವೆ. ವಲಸಿಗರ ಮನೆಗಳಿಗೆ ನುಗ್ಗಿ ನಾಳೆಯೇ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಲಾಗುತ್ತಿರುವುದು ತಿಳಿದುಬಂದಿದೆ.
ದೊಂಬಿ ಗಲಾಟೆ ಸಂಬಂಧ ಪೊಲೀಸರು ಈವರೆಗೆ 170 ಜನರನ್ನು ಬಂಧಿಸಿದ್ದಾರೆ. ಗುಜರಾತ್ನ ವಿವಿಧ ಜಿಲ್ಲೆಗಳಲ್ಲಿ 18 ಎಫ್ಐಆರ್ಗಳನ್ನ ದಾಖಲಿಸಲಾಗಿದೆ.
Comments are closed.