ರಾಷ್ಟ್ರೀಯ

ವೈದ್ಯೆಯ ಕತ್ತು ಸೀಳಿದ ಗಾಳಿಪಟದ ದಾರ: 20 ನಿಮಿಷ ರಕ್ತದ ಮಡುವಿನಲ್ಲಿ ಒದ್ದಾಡಿದ ವೈದ್ಯೆ

Pinterest LinkedIn Tumblr


ಪುಣೆ: ಗಾಳಿ ಪಟದ ಚೈನಾ ಮಾಂಜಾ ದಾರ ಕತ್ತು ಸೀಳಿದ ಪರಿಣಾಮ ಫ್ಲೈಓವರ್‌ನಲ್ಲಿ ಸ್ಕೂಟರ್‌ ಸವಾರೆಯಾಗಿ ತೆರಳುತ್ತಿದ್ದ ಯುವ ವೈದ್ಯೆ ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಪುಣೆಯ ಬೋಸಾರಿ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದಿದೆ.

26 ರ ಹರೆಯದ ಆಯುರ್ವೇದ ವೈದ್ಯೆ ಕೃಪಾಲಿ ನಿಕ್ಕಂ ಅವರು ಮೃತ ದುರ್‌ದೈವಿ. ಹಾರಾಡುತ್ತಿದ್ದ ಗಾಳಿಪಟದ ಮಾಂಜಾ ದಾರ ಕತ್ತನ್ನು ಸೀಳಿದ ಪರಿಣಾಮ ಏಕಾಏಕಿ ಸ್ಕೂಟರ್‌ನಿಂದ ಕುಸಿದು ಬಿದ್ದಿದ್ದಾರೆ. ಕತ್ತಿನ ಭಾಗದಿಂದ ತೀವ್ರ ರಕ್ತಸ್ರಾವವಾಗುತ್ತಿತ್ತು. ಆಕೆ ಮಾತನಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

20 ನಿಮಿಷಗಳ ಕಾಲ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಯಾವುದೇ ವಾಹನಗಳು ಲಭ್ಯವಾಗಲಿಲ್ಲ. ಆ ಬಳಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಗಾಜು, ಲೋಹದ ತುಣುಕು, ಬಳೆಚೂರುಗಳನ್ನು ನಯವಾಗಿ ಪುಡಿಮಾಡಿ ದಾರಕ್ಕೆ ಲೇಪನ ಮಾಡಿ ಚೈನಾ ಮಾಂಜಾ ಹೆಸರಿನಲ್ಲಿ ಗಾಳಿಪಟದ ದಾರವನ್ನಾಗಿ ಬಳಸಲಾಗುತ್ತದೆ. ಇದು ಮಾರಕವಾಗಿದ್ದು ಸಾವಿರಾರು ಪಕ್ಷಿಗಳು ಸಾವನ್ನಪ್ಪಿವೆ. ಹಲವರಿಗೆ ಗಾಯಗಳೂ ಆಗಿದ್ದವು. ನಿಷೇಧವಿದ್ದರೂ ಚೈನಾ ಮಾಂಜಾ ದಾರಗಳ ಮಾರಾಟ ಮತ್ತು ಹಾರಾಟ ಎಗ್ಗಿಲ್ಲದೆ ಮುಂದುವರಿದಿರುವುದು ದುರಂತಕ್ಕೆ ಕಾರಣವಾಗಿದೆ.

Comments are closed.