ರಾಷ್ಟ್ರೀಯ

ಅಪೂರ್ಣ ವಸತಿ ಯೋಜನೆ: ಅಮ್ರ್​ಪಾಲಿ ಗ್ರೂಪ್​ ಬಿಲ್ಡರ್ಸ್​ನ 3 ನಿರ್ದೇಶಕರಿಗೆ ಜೈಲು

Pinterest LinkedIn Tumblr


ನವದೆಹಲಿ: ಸುಪ್ರೀಂ ಕೋರ್ಟ್​ ಅಮ್ರ್​ಪಾಲಿ ಬಿಲ್ಡರ್ಸ್​ನ ಮೂವರು ನಿರ್ದೇಶಕರನ್ನು ಬಂಧಿಸುವಂತೆ ಆದೇಶಿಸಿದೆ. ಸುಪ್ರೀಂ ಕೋರ್ಟ್​ ಜೊತೆ ಯಾವುದೇ ಆಟ ಆಡಬೇಡಿ ಎಂದು ಎಚ್ಚರಿಸಿರುವ ಸರ್ವೋಚ್ಚ ನ್ಯಾಯಾಲಯ ನಿರ್ದೇಶಕರಾದ ಅನಿಲ್ ಶರ್ಮಾ, ಶಿವಪ್ರಿಯ ಹಾಗೂ ಅಜಯ್ ಕುಮಾರ್​ರನ್ನು ಪೊಲೀಸ್​ ಕಸ್ಟಡಿಗೆ ವಹಿಸಲಾಗಿದೆ. ಎಲ್ಲಾ ದಾಖಲೆಗಳನ್ನು ಆಡಿಟರ್ಸ್​ಗೆ ನೀಡುವವರೆಗೆ ಈ ಮೂವರು ಪೊಲೀಸ್​ ಕಸ್ಟಡಿಯಲ್ಲೇ ಇರಬೇಕೆಂದು ಸುಪ್ರೀಂ ಆದೇಶಿಸಿದೆ.

ಏನಿದು ಪ್ರಕರಣ:
ಅಪೂರ್ಣ ವಸತಿ ಯೋಜನೆ ಹಾಗೂ ಆದೇಶಗಳನ್ನು ಕಡೆಗಣಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮ್ರ್​ಪಾಲಿ ರಿಯಲ್​ ಎಸ್ಟೇಟ್​ ಗ್ರೂಪ್​ ವಿರುದ್ಧ ಸುಪ್ರೀಂ ಕೋರ್ಟ್​ ಮತ್ತಷ್ಟು ಕಟು ನಿಲುವು ತೋರಿಸಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್​ ಈ ಆದೇಶ ನೀಡಿದೆ.

ಜಸ್ಟೀಸ್​ ಅರುಣ್​ ಮಿಶ್ರಾ ಹಾಗೂ ಜಸ್ಟೀಸ್​ ಯುಯು ಲಲಿತ್​ ನೇತೃತ್ವದ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ ‘ಕಣ್ಣು ಮುಚ್ಚಾಲೆ’ ಆಡಬೇಡಿ ಎಂದಿದ್ದಾರೆ. ಅಲ್ಲದೇ ಬಿಲ್ಡರ್ಸ್​ಗಳು ಬೇಕೆಂದೇ ಕೋರ್ಟ್​ ಆದೇಶವನ್ನು ಪಾಲಿಸುತ್ತಿಲ್ಲ. ಇದು ನ್ಯಾಯಾಲಯದ ಘನತೆಯೊಂದಿಗೆ ಚೆಲ್ಲಾಟವಾಡಿದಂತೆ ಎಂದಿದ್ದಾರೆ.

ಕಳೆದ ಬಾರಿಯ ವಿಚಾರಣೆ ವೇಳೆ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್​ 2015ರಿಂದ ಈವರೆಗೆ ಅಮ್ರ್​ಪಾಲಿ ಬಿಲ್ಡರ್ಸ್​ನ 46 ಕಂಪೆನಿಗಳ ಎಲ್ಲಾ ಖಾತೆಗಳ ವಿವರವನ್ನು ಯಾಕೆ ಕೋರ್ಟ್​ಗೆ ನೀಡಿಲ್ಲ ಎಂದು ಪ್ರಶ್ನಿಸಿತ್ತು. ಅಲ್ಲದೇ 10 ದಿನಗಳೊಳಗೆ ಎಲ್ಲಾ ಅಕೌಂಟ್​ಗಳ ಬ್ಯಾಲೆನ್ಸ್​ ಶೀಟ್​ ಸಲ್ಲಿಸುವಂತೆ ನಿರ್ದೇಶಿಸಿತ್ತು.

ಕಳೆದ ಬಾರಿಯ ವಿಚಾರಣೆಯಲ್ಲಿ ಸುಪ್ರೀಂ ತನ್ನ ಆದೇಶದಲ್ಲಿ ಅಮ್ರ್​ಪಾಲಿ ಗ್ರೂಪ್​ ಹೆಸರಿನಲ್ಲಿರುವ 16 ಆಸ್ತಿಗಳು ಹರಾಜಾಗಲಿವೆ ಹಾಗೂ 46 ಕಂಪೆನಿಗಳು ಹಾಗೂ ಅದರ ನಿರ್ದೇಶಕರ ಸಂಪತ್ತು ಫಾರೆನ್ಸಿಕ್​ ಅಡಿಟ್​ ಆಗಬೇಕು ಎಂದಿತ್ತು. ಇದರೊಂದಿಗೆ ಕಂಪೆನಿಯ ನಿರ್ದೇಶಕರಲ್ಲೊಬ್ಬರಾದ ಅನಿಲ್​ ಶರ್ಮಾರಿಗೆ 4 ದಿನಗಳಲ್ಲಿ ಸಂಪತ್ತಿನ ವಿವರವನ್ನು ಅಫಿಡವಿಟ್​ನಲ್ಲಿ ಸಲ್ಲಿಸುವಂತೆಯೂ ಸೂಚಿಸಿತ್ತು.

Comments are closed.