ನವದೆಹಲಿ: ಹಿಂದೂ ಮಹಿಳೆಯರು ಶಬರಿಮಲೆ ಪ್ರವೇಶಿಸಬಹುದು ಎಂದು ತೀರ್ಪು ಬಂದ ಬೆನ್ನಲ್ಲೇ ಮಸೀದಿ ಪ್ರವೇಶಕ್ಕೆ ಅವಕಾಶ ಮಾಡಿಕೊಡುವಂತೆ ಸುಪ್ರೀಂ ಮೊರೆ ಹೋಗಲು ಮುಸ್ಲಿಂ ಮಹಿಳೆಯರು ನಿರ್ಧರಿಸಿದ್ಧಾರೆ. ಅಲ್ಲದೇ ದೇಶದ ಎಲ್ಲ ಮಸೀದಿಗಳಲ್ಲೂ ಸ್ತ್ರೀಯರ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಚಿಂತಿಸಿದ್ಧಾರೆ ಎನ್ನಲಾಗಿದೆ.
ಇತ್ತೀಚೆಗೆ ಸುಪ್ರೀಂಕೋರ್ಟ್ ಶಬರಿಮಲೆ ದೇಗುಲ ಪ್ರವೇಶಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಅನುಮತಿ ನೀಡಿತ್ತು. ಈ ಮಹತ್ತರ ಆದೇಶದ ಬೆನ್ನಲ್ಲೇ ಇತರೆ ಧರ್ಮಗಳ ಮಹಿಳೆಯರಂತೆ ನಮಗೂ ಮಸೀದಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಿ ಎಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಕೇರಳ ಮೂಲದ “ನಿಸಾ (NISA) ಎಂಬ ಮಹಿಳಾ ಪ್ರಗತಿಪರ ವೇದಿಕೆ ಮುಂದಾಗಿದೆ.
ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅನುಮತಿ ನೀಡಬೇಕು. ಜೊತೆಗೆ ಮಹಿಳೆಯರನ್ನೇ ‘ಇಮಾಮ್’ಗಳಾಗಿ ನೇಮಕ ಮಾಡಬೇಕು ಎಂದೂ ಹೋರಾಟ ನಡೆಸಲು ಸಜ್ಜಾಗಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ಮತ್ತೆ ತನ್ನ ಗಂಡನ ಜೊತೆಗೆ ವಾಸ ಮಾಡಬೇಕೆಂದು ಬಯಕೆ ಇರುತ್ತದೆ. ಮುಸ್ಲಿಂ ಮಹಿಳೆಯರ ಈ ಆಸೆಗೆ ವಿರುದ್ಧವಾಗಿರುವ ‘ನಿಖಾ ಹಲಾಲ’ ಪದ್ಧತಿ ಮತ್ತು ಬಹುಪತ್ನಿತ್ವದ ವಿರುದ್ಧವೂ ಈ ವೇದಿಕೆ ಹೋರಾಟ ನಡೆಸುತ್ತಿದೆ ಎನ್ನಲಾಗಿದೆ.
ಈ ಸಂಬಂಧ ಸುದ್ದಿಗಾರರ ಜೊತೆಗೆ ಮಾತಾನಾಡಿದ ನಿಸಾ(NISA) ಎಂಬ ಮಹಿಳಾ ಪ್ರಗತಿಪರ ವೇದಿಕೆಯ ಅಧ್ಯಕ್ಷೆ ವಿ.ಪಿ. ಜುಹ್ರಾ ಅವರು, ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಪವಿತ್ರ ಕುರಾನ್‌ನಲ್ಲಿ ವಿರೋಧವಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕುರಾನ್‌ನಲ್ಲಿ ಯಾವುದೇ ದಾಖಲೆಗಳಿಲ್ಲ. ಸ್ತ್ರೀಯರ ಮಸೀದಿ ಪ್ರವೇಶವನ್ನು ಪ್ರವಾದಿ ಮುಹಮ್ಮದರು ವಿರೋಧಿಸಿದ್ದರು ಎಂಬುದಕ್ಕೂ ಯಾವುದೇ ಆಧಾರವಿಲ್ಲ. ಇದು ಎಲ್ಲವೂ ಸುಳ್ಳು ಎಂದು ಹೇಳಿದರು.
ಕಾನೂನು ತಜ್ಞರ ಅಭಿಪ್ರಾಯ: ಈ ಸಂಬಂಧ ನ್ಯೂಸ್-18 ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಪ್ರಗತಿಪರ ಚಿಂತಕರು ಹಾಗೂ ಕಾನೂನುತಜ್ಞರಾದ ಸುಲ್ತಾನ್ ಬ್ಯಾರಿ ಅವರು, ಮಸೀದಿಯಲ್ಲಿ ಎಲ್ಲಾ ಮಹಿಳೆಯರ ಪ್ರಾರ್ಥನೆಗೆ ಅವಕಾಶವಿದೆ ಎಂದು ಕುರಾನ್ ಹೇಳುತ್ತದೆ. ಆದರೆ, ಕೆಲವು ಪುರುಷಾಧಿಪತ್ಯ ಮನಸ್ಸುಗಳು ಮಹಿಳೆಯರ ಪ್ರವೇಶವನ್ನು ವಿರೋಧಿಸುತ್ತಿದ್ಧಾರೆ. ಸಂವಿಧಾನದಲ್ಲಿ ಕೂಡ ಮಹಿಳೆಯರ ಪ್ರವೇಶಕ್ಕೆ ಅವಕಾಶವಿದೆ ಎಂದರು.
ಇನ್ನು ಮಸೀದಿ ಪ್ರವೇಶ ಕಾನೂನುಬದ್ಧಗೊಳಿಸುವಂತೆ ಮಹಿಳೆಯರ ಹೋರಾಟ ಅನಿವಾರ್ಯವಾಗಿದೆ. ಸುಪ್ರೀಂಕೋರ್ಟ್ ಇದರಲ್ಲಿಯೂ ಮಹಿಳಾಪರ ತೀರ್ಪನ್ನು ನೀಡಲಿದೆ. ದೇಶದಲ್ಲಿರುವ ಮೂರು ರೀತಿಯ ಇಸ್ಲಾಂ ಮಸೀದಿಗಳಿಗೆ ಮುಸ್ಲಿ ಮಹಿಳೆಯರ ಪ್ರವೇಶಕ್ಕೆ ಕೋರ್ಟ್ ಅವಕಾಶ ಮಾಡಿಕೊಡಲಿದೆ. ಇದು ನಮ್ಮ ಸಮುದಾಯದ ಮಹಿಳೆಯರ ಹೋರಾಟಕ್ಕೆ ಸಿಗುವ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಮಹಿಳೆಯರ ಪರವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇದೀಗ ಮಸೀದಿ ಪ್ರವೇಶಕ್ಕೆ ಅನುಮತಿ ಕೋರಿ ಮುಸ್ಲಿಂ ಮಹಿಳೆಯರು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದು, ಯಾವ ರೀತಿಯ ತೀರ್ಪು ನೀಡಲಿದೆ ನ್ಯಾ. ರಂಜನ್ ಗೊಗಾಯ್ ನೇತೃತ್ವದ ಪೀಠ ಎಂದು ಕಾದು ನೋಡಬೇಕಿದೆ.
Comments are closed.